Wed. Jul 8th, 2026

ಕೇಂದ್ರದ ಕೈಗೊಂಬೆಯಾದ ಚುನಾವಣಾ ಆಯೋಗ: ಪ್ರಿಯಾಂಕ್ ಖರ್ಗೆ ವಾಗ್ದಾಳಿ!

Share this with Friends

ಬೆಂಗಳೂರು:ಮತದಾರರ ಪಟ್ಟಿ ವಿಶೇಷ ಪರಿಶೀಲನೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ದೆಹಲಿಗೆ ಹೋಗಿ ದೂರು ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಚುನಾವಣಾ ಆಯೋಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ರಾಜಕೀಯ ಬೆಳವಣಿಗೆಯನ್ನು ನಾವು ಮೊದಲೇ ಊಹಿಸಿದ್ದೆವು. ವಿರೋಧ ಪಕ್ಷಗಳು ಹೇಳಿದ ತಕ್ಷಣವೇ ಸ್ಪಂದಿಸುವ ಚುನಾವಣಾ ಆಯೋಗವು, ನಾವು ವೈಜ್ಞಾನಿಕ ಹಾಗೂ ಸಂವಿಧಾನಾತ್ಮಕವಾಗಿ ಮಂಡಿಸಿದ 12 ಪ್ರಮುಖ ಅಂಶಗಳಿಗೆ ಇದುವರೆಗೂ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪಶ್ಚಿಮ ಬಂಗಾಳದಲ್ಲಿ ಅನುಸರಿಸಿದ ಮಾದರಿಯಲ್ಲೇ ರಾಜ್ಯದಲ್ಲೂ ವಿಪಕ್ಷಗಳು ತಂತ್ರ ರೂಪಿಸುತ್ತಿವೆ ಎಂದು ಅವರು ದೂರಿದರು.

ಬರ ಘೋಷಣೆ ಮತ್ತು ಪರಿಹಾರ ಕೇಂದ್ರದ ಕೈಯಲ್ಲಿದೆ:

ರಾಜ್ಯದ ಬರಗಾಲದ ಸ್ಥಿತಿಯ ಬಗ್ಗೆ ಮಾತನಾಡಿದ ಸಚಿವರು, ಬರ ಪರಿಹಾರದ ವಿಷಯದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಕೇವಲ ವರದಿ ಸಿದ್ಧಪಡಿಸಿ ಸಲ್ಲಿಸುವುದು ಮಾತ್ರವಾಗಿರುತ್ತದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಬಿತ್ತನೆ, ಮಣ್ಣಿನ ತೇವಾಂಶ ಹಾಗೂ ಮೇವಿನ ಲಭ್ಯತೆಯನ್ನು ಪರಿಶೀಲಿಸಿ ವರದಿ ಕಳುಹಿಸಲಾಗುತ್ತದೆ. ಅಂತಿಮವಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಬರ ಘೋಷಣೆ ಮಾಡುವುದು ಹಾಗೂ ಪರಿಹಾರ ಬಿಡುಗಡೆ ಮಾಡುವುದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಪ್ರಶಂಸೆ:

ಇದೇ ವೇಳೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರ ಸರ್ಕಾರವೇ ಮೆಚ್ಚುಗೆ ಸೂಚಿಸಿರುವುದು ಉತ್ತಮ ಬೆಳವಣಿಗೆ ಎಂದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇಡೀ ದೇಶದಲ್ಲೇ ಅತ್ಯುತ್ತಮ ಸ್ಥಾನದಲ್ಲಿದೆ ಎಂದು ಪ್ರಧಾನಿಯವರೇ ಪ್ರಮಾಣೀಕರಿಸಿದ್ದಾರೆ ಎಂದರು. ಜಲ ಜೀವನ್ ಮಿಷನ್ ಯೋಜನೆಯಲ್ಲೂ ರಾಜ್ಯವು ಪ್ರಮುಖ ಮೂರು ಸ್ಥಾನಗಳಲ್ಲಿದ್ದು, ಗ್ಯಾರಂಟಿ ಯೋಜನೆಗಳಿಂದಾಗಿ ಜನರಿಗೆ ಆರ್ಥಿಕ ಭದ್ರತೆ ಸಿಗುತ್ತಿದೆ ಎಂದು ಹೆಳಿದರು.

ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಬೇಕಿಲ್ಲ:

ಬೆಳಗಾವಿಯಲ್ಲಿ ಆಯೋಜನೆಯಾಗಿರುವ ಆರ್‌ಎಸ್‌ಎಸ್ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, ಅದೊಂದು ವೇಳೆ ಖಾಸಗಿ ಕಾರ್ಯಕ್ರಮವಾಗಿದ್ದರೆ ಅದಕ್ಕೆ ಸರ್ಕಾರದ ಅನುಮತಿಯ ಅಗತ್ಯವಿರುವುದಿಲ್ಲ. ಆದರೆ, ಸಾರ್ವಜನಿಕವಾಗಿ ಮೆರವಣಿಗೆ ಅಥವಾ ಬೀದಿಗೆ ಇಳಿಯುವ ಕಾರ್ಯಕ್ರಮಗಳಿದ್ದಾಗ ಮಾತ್ರ ಸ್ಥಳೀಯ ಪೊಲೀಸರಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ನಾಯಕ ಸಿ.ಟಿ. ರವಿ ಅವರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನನ್ನ ವಿರುದ್ಧವೇ ದೂರು ದಾಖಲಿಸುವಂತೆ ನೇರ ಸವಾಲು ಹಾಕಿದ್ದಾರೆ.

ಸವಾಲು ಮತ್ತು ತನಿಖೆಯ ಭರವಸೆ:

ತೇಜಸ್ ಗೌಡ ಅವರ ನಿವಾಸಕ್ಕೆ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕಿಸಲಾಗಿದೆ ಎಂದು ಸಿ.ಟಿ. ರವಿ ಮಾಡಿರುವ ಆರೋಪಕ್ಕೆ ಉತ್ತರಿಸಿದ ಖರ್ಗೆ, “ನನ್ನ ವಿರುದ್ಧವೇ ದೂರು ನೀಡಿ, ನಾನು ಈ ಕುರಿತು ಅತ್ಯಂತ ಪಾರದರ್ಶಕ ತನಿಖೆ ನಡೆಸುತ್ತೇನೆ. ಅಗತ್ಯವಿದ್ದರೆ ಈ ಪ್ರಕರಣದ ವಿಚಾರಣೆಗೆ ವಿಶೇಷ ಸಮಿತಿಯನ್ನು ರಚಿಸಿ, ಅದರಲ್ಲಿ ಅವರನ್ನೇ ಸೇರಿಸಿಕೊಳ್ಳುತ್ತೇನೆ” ಎಂದು ತಿರುಗೇಟು ನೀಡಿದ್ದಾರೆ.

ವಾಯ್ಸ್ ಸ್ಯಾಂಪಲ್ ವಿವಾದ:

ಇದೇ ವೇಳೆ ಸಿ.ಟಿ. ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವರು, “ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಾಯ್ಸ್ ಸ್ಯಾಂಪಲ್ (ಧ್ವನಿ ಮಾದರಿ) ನೀಡಲು ನಿರಾಕರಿಸಿದವರು ಈಗ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಅವರು ಮೊದಲು ತಮ್ಮ ವಾಯ್ಸ್ ಸ್ಯಾಂಪಲ್ ಅನ್ನು ನೀಡಲಿ” ಎಂದು ಕಟುವಾಗಿ ಹೇಳಿದ್ದಾರೆ.

 

 


Share this with Friends

Related Post