ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ವ್ಯಾಪಕ ಅಕ್ರಮಗಳನ್ನು ಎಸಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಉನ್ನತ ಮಟ್ಟದ ಜಂಟಿ ನಿಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ. ರಾಜ್ಯ ಸರ್ಕಾರದ ರಾಜಕೀಯ ಹಸ್ತಕ್ಷೇಪ ಹಾಗೂ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಮೈತ್ರಿ ನಾಯಕರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಉನ್ನತ ಮಟ್ಟದ ನಿಯೋಗವು ಜಂಟಿಯಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ,ಎಸ್‌ಐಆರ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಆಯೋಗಕ್ಕೆ ಮನವಿ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದರು.
ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ರವಾನೆ ಹಾಗೂ ಅಕ್ರಮ:
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಕ್ರಮವಾಗಿ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿಕೊಂಡು ಆಡಳಿತ ಪಕ್ಷಕ್ಕೆ ಪೂರಕವಾದ ಮಾಹಿತಿಯನ್ನು ರವಾನಿಸಲಾಗುತ್ತಿದೆ ಎಂದು ಜೋಶಿ ಆರೋಪಿಸಿದರು. ಅಧಿಕಾರಿಗಳು ತಮಗೆ ಬೇಕಾದ ನಿರ್ದಿಷ್ಟ ಪ್ರದೇಶಗಳು, ಮದರಸಾ ಹಾಗೂ ಮಸೀದಿಗಳಲ್ಲೇ ಎಸ್‌ಐಆರ್ ನಡೆಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಹಿಂದಿನ ಚುನಾವಣಾ ಪ್ರತಿನಿಧಿಗಳ ನಿವಾಸಗಳಲ್ಲಿ ಅಥವಾ ಒಂದು ನಿರ್ದಿಷ್ಟ ಸಮುದಾಯದ, ವಿಶೇಷವಾಗಿ ಮುಸ್ಲಿಂ ಮುಖಂಡರ ಕೈಗೆ ಜವಾಬ್ದಾರಿ ನೀಡಿ, ಅವರೇ ಓಣಿ ಹಾಗೂ ಬೂತ್ ಮಟ್ಟದಲ್ಲಿ ಎಸ್‌ಐಆರ್ ಮಾಡಿಕೊಂಡು ಬರುವಂತೆ ಬಿಡಲಾಗಿದೆ. ನಿಯಮಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ನೀಡಬೇಕಾದ ಮಾಹಿತಿಯನ್ನು ರಾಜಕೀಯ ಪಕ್ಷಗಳ ಏಜೆಂಟರಿಗೆ (BLA) ನೀಡುತ್ತಿಲ್ಲ ಮತ್ತು ಕೇಳಿದರೆ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ತಾವು ಈ ಹಿಂದೆ ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಈಗ ಉನ್ನತ ಮಟ್ಟದ ನಿಯೋಗದ ಮೂಲಕ ದೂರು ನೀಡಿ ತೀವ್ರ ಒತ್ತಾಯ ಮಾಡಿರುವುದಾಗಿ ಹೇಳಿದರು. ಹಲವು ಕಡೆಗಳಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರ ಭಾವಚಿತ್ರಗಳನ್ನು ಬಳಸಿ ಬಿಎಲ್‌ಒಗಳೇ ಪ್ರಚಾರ ಮಾಡುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು. ಎಲ್ಲೆಲ್ಲಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗಿದೆಯೋ, ಅದನ್ನೆಲ್ಲ ತಕ್ಷಣವೇ ರದ್ದುಪಡಿಸಿ ಹೊಸದಾಗಿ ಪಾರದರ್ಶಕವಾಗಿ ಎಸ್‌ಐಆರ್ ನಡೆಸಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದರು
ಸಮಾನಾಂತರ ಎಸ್‌ಐಆರ್ ಹಾಗೂ ದೆಹಲಿಯಲ್ಲಿ ದೂರು:
ವಿವಿಧ ವಾರ್ಡ್‌ಗಳಲ್ಲಿ ಜನರನ್ನು ಹಿಂಡು ಹಿಂಡಾಗಿ ಕರೆತಂದು ಅರ್ಜಿಗಳನ್ನು ತುಂಬಿಸುವ ಪ್ರಯತ್ನಗಳ ಜೊತೆಗೆ, ಸಮಾನಾಂತರವಾಗಿ ಅಕ್ರಮ ಎಸ್‌ಐಆರ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಚುನಾವಣಾ ಆಯೋಗವು ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದರೂ, ಕತ್ತೆ ಕಾಯಲು ಯೋಗ್ಯತೆ ಇಲ್ಲದ ಈ ಕಾಂಗ್ರೆಸ್ ಸರ್ಕಾರವು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ ಎಂದು ಜೋಶಿ ಕಿಡಿಕಾರಿದರು. ಬಿಎಲ್‌ಒಗಳಾಗಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಸ್ಥಳೀಯ ಕಾಂಗ್ರೆಸ್ ಶಾಸಕರು ತೀವ್ರ ಒತ್ತಡ ಹಾಗೂ ಬೆದರಿಕೆ ತರುತ್ತಿದ್ದು, ಈ ಕೂಡಲೇ ಅವರ ಬದಲಿಗೆ ಸ್ವತಂತ್ರ ಅಧಿಕಾರಿಗಳನ್ನು ನೇಮಿಸಿ ಮನೆಮನೆಗೆ ತೆರಳಿ ಅರ್ಜಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ತಾವು ರಾಜ್ಯ ಆಯುಕ್ತರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಅಥವಾ ಅವರ ರಾಜೀನಾಮೆಗೆ ಒತ್ತಾಯಿಸಿಲ್ಲ, ಬದಲಿಗೆ ಅಕ್ರಮ ನಡೆದ ಕಡೆಗಳಲ್ಲಿ ಮರು ಎಸ್‌ಐಆರ್ ನಡೆಸುವಂತೆ ಮಾತ್ರ ಕೋರಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಇಡೀ ಹಗರಣದ ವಿರುದ್ಧ ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಖುದ್ದಾಗಿ ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದರು.

