ಕಲಬುರಗಿ: ಹೆಡ್‌ಲೈಟ್ ಕೆಟ್ಟುಹೋಗಿದ್ದರೂ ಪ್ರಯಾಣಿಕರ ಪ್ರಾಣವನ್ನು ಪಣಕ್ಕಿಟ್ಟು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ ಮಾಡಿದ ಅತ್ಯಂತ ಬೇಜವಾಬ್ದಾರಿ ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕಠಿಣ ಶಿಸ್ತುಕ್ರಮ ಜರುಗಿಸಿದ್ದಾರೆ.
ರಾತ್ರಿ ವೇಳೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಮೇಲ್ವಿಚಾರಕ ಸೇರಿದಂತೆ ಮೂವರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.ಚಿಂಚೋಳಿ ಘಟಕಕ್ಕೆ ಸೇರಿದ ಬಸ್ ಚಾಲಕ ಆಕಾಶ್, ತಾಂತ್ರಿಕ ಸಿಬ್ಬಂದಿ ಶಿವಾನಂದ್ ಹಾಗೂ ತಾಂತ್ರಿಕ ಮೇಲ್ವಿಚಾರಕ ಬಸವರಾಜ್ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ
84 ಕಿಲೋಮೀಟರ್ ಕತ್ತಲಲ್ಲೇ ಪ್ರಯಾಣ:
ಈ ಘಟನೆಯು ಕಲಬುರಗಿಯಿಂದ ಚಿಂಚೋಳಿಗೆ ತೆರಳುತ್ತಿದ್ದ ರಾತ್ರಿಯ ಕೊನೆಯ ಸರ್ಕಾರಿ ಬಸ್‌ನಲ್ಲಿ ಸಂಭವಿಸಿದೆ. ನಿಲ್ದಾಣದಿಂದ ಹೊರಟ ಸ್ವಲ್ಪ ದೂರದಲ್ಲೇ ಬಸ್‌ನ ಹೆಡ್‌ಲೈಟ್ ವೈರಿಂಗ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಲೈಟ್‌ಗಳು ಸಂಪೂರ್ಣ ಬಂದ್ ಆಗಿದ್ದವು. ಆದರೂ ಬಸ್ ನಿಲ್ಲಿಸದ ಸಿಬ್ಬಂದಿ, ಸುಮಾರು 84 ಕಿಲೋಮೀಟರ್ ದೂರದ ಇಡೀ ಕತ್ತಲೆಯ ರಸ್ತೆಯನ್ನು ಕೇವಲ ಮೊಬೈಲ್ ಫೋನ್‌ನ ಸಣ್ಣ ಟಾರ್ಚ್ ಬೆಳಕಿನಲ್ಲೇ ಕ್ರಮಿಸುವ ಹುಂಬತನ ಪ್ರದರ್ಶಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕದಿಂದಲೇ ಇಡೀ ರಾತ್ರಿಯ ಪ್ರಯಾಣ ಮುಗಿಸಬೇಕಾಯಿತು.
ಸಾರ್ವಜನಿಕರ ಆಕ್ರೋಶ:
ಈ ಮಾರ್ಗದಲ್ಲಿ ಚಲಿಸುವ ಬಸ್‌ಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ಗ್ರಾಮೀಣ ನಿವಾಸಿಗಳು ಮತ್ತು ನಿಯಮಿತ ಪ್ರಯಾಣಿಕರು ಗಂಭೀರ ಆರೋಪ ಮಾಡಿದ್ದಾರೆ. ಈ ಅಪಾಯಕಾರಿ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದಲ್ಲದೆ, ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಬೇಜವಾಬ್ದಾರಿತನ ಹಾಗೂ ಪ್ರಯಾಣಿಕರ ಸುರಕ್ಷತೆಯ ವೈಫಲ್ಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಎಚ್ಚೆತ್ತಿರುವ ಡಿಪೋ ವ್ಯವಸ್ಥಾಪಕರು, ದೋಷಪೂರಿತ ಬಸ್ ಅನ್ನು ಸೇವೆಯಿಂದ ಹಿಂಪಡೆದು ಆ ಮಾರ್ಗಕ್ಕೆ ಹೊಸ ಬಸ್ ಅನ್ನು ನಿಯೋಜಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

