ಬೆಂಗಳೂರು:ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆಯಿಂದಾಗಿ ಅನ್ನದಾತರು ಕಂಗಾಲಾಗಿದ್ದು, ಅವರ ನೆರವಿಗೆ ಬರಬೇಕಾದ ತುರ್ತು ಜವಾಬ್ದಾರಿ ಸರ್ಕಾರದ ಮೇಲಿದೆ. ರೈತರ ಸಾಲ ಮನ್ನಾ ಮಾಡುವ ಕುರಿತು ಆಡಳಿತ ಪಕ್ಷದ ನಾಯಕರಿಂದ ಬರುತ್ತಿರುವ ಹೇಳಿಕೆಗಳನ್ನು ನಾವು ಗಮನಿಸುತ್ತಿದ್ದೇವೆ. ಸರ್ಕಾರ ನಿಜವಾಗಿಯೂ ರೈತರ ಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತದೆಯೇ ಅಥವಾ ಕೇವಲ ಮೊಸಳೆ ಕಣ್ಣೀರು ಸುರಿಸುತ್ತದೆಯೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಗಂಭೀರ ಸಾಲಮನ್ನಾ ವಿಷಯವನ್ನು ಮುಂಬರುವ ಸದನದಲ್ಲಿಯೂ ಪ್ರಸ್ತಾಪಿಸಿ ಕಟುವಾಗಿ ಚರ್ಚಿಸಲಾಗುವುದು ಎಂದು ಅವರು ಎಚ್ಚರಿಸಿದರು.ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಭೀಕರ ಬರಗಾಲ ಬಂದಾಗಲೂ ರೈತರಿಗೆ ಸೂಕ್ತ ಪರಿಹಾರ ಧನ ವಿತರಿಸುವಲ್ಲಿ ವಿಫಲವಾಗಿದೆ. ಪ್ರತಿಯೊಂದು ವೈಫಲ್ಯಕ್ಕೂ ಕೇಂದ್ರ ಸರ್ಕಾರವನ್ನೇ ದೂಷಿಸುವುದನ್ನು ಬಿಟ್ಟರೆ ರಾಜ್ಯ ಸರ್ಕಾರ ಬೇರೇನೂ ಸಾಧಿಸಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಡ್ಡಮತದಾನದ ವರದಿ ಹೈಕಮಾಂಡ್ಗೆ ರವಾನೆ:
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಒಳಗಿನ ಈ ಬೆಳವಣಿಗೆಗಳ ಬಗ್ಗೆ ಈಗಾಗಲೇ ಕೇಂದ್ರದ ವರಿಷ್ಠರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಹೈಕಮಾಂಡ್ ನಾಯಕರು ಸೂಕ್ತ ಸಮಯದಲ್ಲಿ ಇದರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಚುನಾವಣಾ ಆಯೋಗಕ್ಕೆ ಸಹಕರಿಸಿ:
ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ನಡೆಯುತ್ತಿರುವ ಪ್ರಸ್ತುತ ತನಿಖಾ ಪ್ರಕ್ರಿಯೆಗಳಿಗೆ (ಎಸ್ಐಆರ್) ಕಾಂಗ್ರೆಸ್ ಸರ್ಕಾರ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಈ ತನಿಖೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ, ಆಯೋಗ ನಡೆಸುತ್ತಿದೆ. ರಾಜ್ಯ ಸರ್ಕಾರಕ್ಕೆ ಗೌರವ ಇದ್ದರೆ ಚುನಾವಣಾ ಆಯೋಗದ ಮೇಲೆ ವಿಶ್ವಾಸವಿಟ್ಟು ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

