ಬೆಂಗಳೂರು: ನಗರದ ಅನಿಲ್ ಕುಂಬ್ಳೆ ವೃತ್ತದಲ್ಲಿ ದುಬಾರಿ ಲಂಬೋರ್ಗಿನಿ ಕಾರಿನಲ್ಲಿ ಅಪಾಯಕಾರಿ ‘ಡ್ರಿಫ್ಟಿಂಗ್’ ನಡೆಸಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಘಟನೆಯ ಸುತ್ತ ಕೇಳಿಬಂದ ವಿಚಿತ್ರ ಸಮರ್ಥನೆಗೆ ಬೆಂಗಳೂರು ಪೊಲೀಸರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಕೆಲ ದಿನಗಳ ಹಿಂದೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಚಲಾಯಿಸುತ್ತಿದ್ದರೆನ್ನಲಾದ ಲಂಬೋರ್ಗಿನಿ ಕಾರು, ನಗರದ ಹೃದಯಭಾಗದ ಸಿಗ್ನಲ್ ಬಳಿ ರಸ್ತೆಯಲ್ಲೇ ಗಿರಕಿ ಹೊಡೆದು (Drifting) ಸಾಹಸ ಪ್ರದರ್ಶಿಸಿತ್ತು. ಈ ವೀಡಿಯೊ ವೈರಲ್ ಆದ ಬೆನ್ನಲ್ಲೇ ಸಂಚಾರಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ವಕೀಲರ ‘ಕ್ರಿಯೇಟಿವಿಟಿ’ ವಾದ:
ವಿಚಾರಣೆ ವೇಳೆ ರಿಕ್ಕಿ ರೈ ಪರ ವಕೀಲರು ನೀಡಿದ ಹೇಳಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. “ಅದು ಉದ್ದೇಶಪೂರ್ವಕವಾಗಿ ಮಾಡಿದ ಸಾಹಸವಲ್ಲ. ರಸ್ತೆ ಸರಿಯಿಲ್ಲದ ಕಾರಣ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗಿದೆ. ಚಾಲಕನ ಸೃಜನಶೀಲತೆ (Creativity) ಮತ್ತು ಸಮಯಪ್ರಜ್ಞೆಯಿಂದಾಗಿ ಕಾರು ನಿಯಂತ್ರಣಕ್ಕೆ ಬಂದಿದೆ, ಅನಾಹುತ ತಪ್ಪಿದೆ” ಎಂದು ಸಮರ್ಥಿಸಿಕೊಂಡಿದ್ದರು.
ಪೊಲೀಸರ ಸಿನಿಮೀಯ ತಿರುಗೇಟು:
ವಕೀಲರ ಈ ‘ಸೃಜನಶೀಲತೆ’ಯ ವಾದವನ್ನು ಲೇವಡಿ ಮಾಡಿರುವ ಬೆಂಗಳೂರು ಪೊಲೀಸರು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ‘ಸು ಪ್ರಂ ಸೋ’ ಚಿತ್ರದ ಜನಪ್ರಿಯ ಹಾಡು “ಬಂದರೋ ಬಂದರೋ ಭಾವ ಬಂದರೋ…” ಹಿನ್ನೆಲೆ ಸಂಗೀತ ಬಳಸಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
“ಸೃಜನಶೀಲತೆ ಮತ್ತು ಪ್ರತಿಭೆ ಪ್ರದರ್ಶಿಸಲು ರಸ್ತೆಗಳು ಮತ್ತು ಸಿಗ್ನಲ್‌ಗಳು ವೇದಿಕೆಯಲ್ಲ. ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಇಂತಹ ‘ಟ್ಯಾಲೆಂಟ್’ಗಳಿಗೆ ಜೈಲು ಕಂಬಿಗಳೇ ಸರಿಯಾದ ಜಾಗ” ಎಂಬ ಸಂದೇಶವನ್ನು ಹಾಸ್ಯ ಮಿಶ್ರಿತವಾಗಿ ರವಾನಿಸಿದ್ದಾರೆ. ಪೊಲೀಸರ ಈ ಸೃಜನಶೀಲ ಜಾಗೃತಿ ಕ್ರಮಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

