Sat. Jun 6th, 2026

ಅನುಮೋದನೆಗೊಂಡ ‘ಇವ ನಮ್ಮವ ಇವ ನಮ್ಮವ’  ವಿಧೇಯಕ

Share this with Friends

ಬೆಂಗಳೂರು: ಮರ್ಯಾದೆ ಮತ್ತು ಸಂಪ್ರದಾಯ ಹೆಸರಿನಲ್ಲಿ ಎಸಗುವ ಅಪರಾಧಗಳನ್ನು ತಡೆಯುವ ಸಲುವಾಗಿ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ 2026   ನೇ ಸಾಲಿನ ಕರ್ನಾಟಕ ವಿವಾಹದಲ್ಲಿನ ಆಯ್ಕೆಯ ಸ್ವಾತಂತ್ರ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ( ಇವ ನಮ್ಮವ ಇವ ನಮ್ಮವ ) ವಿಧೇಯಕವು ಅನುಮೋದನೆಗೊಂಡಿತು.

ಈ ವಿಧೇಯಕವನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್. ಕೆ. ಪಾಟೀಲ್ ಅವರು ಮಂಡಿಸಿದರು.ಈ ವಿಧೇಯಕದ ಕುರಿತು ವಿವರಿಸಿದ ಸಚಿವರು ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ನೀಡುವ ಸಲುವಾಗಿ ಕಾನೂನಿನ ಬಲ ಅತ್ಯಂತ ಅಗತ್ಯವಾಗಿದೆ ಎಂದರು.

ಹದಿಹರೆಯದ ಮಕ್ಕಳು ಓಡಿ ಹೋಗಿ, ಕದ್ದು ಮುಚ್ಚಿ ಮದುವೆ ಮಾಡಿಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಒಪ್ಪದ ಅಂರ್ತಜಾತಿ ವಿವಾಹ ಆಗಲು ಬಯಸುವವರಿಗೆ ಕಾನೂನಿನಡೆ ರಕ್ಷಣೆ ನೀಡಿ, ಸುರಕ್ಷಿತ ಮದುವೆಗೆ ವೇದಿಕೆಯನ್ನು ಒದಗಿಸಲಾಗಿದೆ. ಇದರಿಂದ ಮರ್ಯಾದ ಹತ್ಯೆಗಳಂತಹ ಪ್ರಕರಣಗಳನ್ನು ತಡೆಹಿಡಿಯಬಹುದು ಎಂದು ತಿಳಿಸಿದರು.

ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಎಸಗುವ ಅಪರಾಧಗಳನ್ನು ತಡೆಯಲು, ವಿವಾಹದಲ್ಲಿನ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ವರ್ತನೆಯನ್ನು ಶಿಕ್ಷಿಸಲು ಹಾಗೂ ಪ್ರತಿಬಂಧಕ, ಪರಿಹಾರಾತ್ಮಕ ಮತ್ತು ಪುನರ್ವ್ಯವಸ್ಥೆಗಾಗಿ ಕಾನೂನು ರಕ್ಷಣೆಗಳು, ಪರಿಹಾರಗಳು ಮತ್ತು ಸಾಂಸ್ಥಿಕ ಕಾರ್ಯವ್ಯವಸ್ಥೆಗಳನ್ನು ಉಪಬಂಧಿಸಲು ಎಲ್ಲಾ ವ್ಯಕ್ತಿಗಳ ಸ್ವಾತಂತ್ರ್ಯ ಘನತೆ ಮತ್ತು ಸ್ಮಾಯತ್ತತೆಯನ್ನು ದೃಢೀಕರಿಸುವ ಮತ್ತು ರಕ್ಷಿಸುವ ಕಾನೂನನ್ನು ಒಳಗೊಂಡಿದೆ ಎಂದರು.

ಈ ವಿಧೇಯ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ಇರುವಾಗ, ಈ ವಿಧೆಯಕದಲ್ಲಿ ಕಡಿಮೆ ಶಿಕ್ಷೆಯನ್ನು ವಿಧಿಸಲಾಗಿದೆ ಎಂದೂ, ಶಾಸಕರಾದ ಸುರೇಶ್ ಕುಮಾರ್ ಅವರು ವಿಧೇಯಕದಲ್ಲಿ ಒಟ್ಟಿಗೆ ಇರಲು ಸಮ್ಮತಿಸುವವರಿಗೆ ಎಂದು ಇರುವುದನ್ನು ತೆಗೆಯಬೇಕು. ಇದು ಲಿವ್ ಇನ್ ರಿಲೇಶನ್ ಎಂದು ಭಾವಿಸುವಂತಾಗುತ್ತದೆ ಎಂದರು.

ಇದಕ್ಕೆ ಉತ್ತರಿಸಿದ ಸಚಿವರು ನಮ್ಮ ಸರ್ಕಾರ ಎಂದಿಗೂ ಲಿವ್ ಇನ್ ರಿಲೇಶನ್ ಗೆ ಬೆಂಬಲ ನೀಡುವುದಿಲ್ಲ. ಯಾರು ಅಂರ್ತಜಾತಿ ವಿವಾಹ ಆಗಲು ಬಯಸುವರೋ, ಅವರಿಗೆ ಕೆಲವು ಕಾರಣಗಳಿಂದ ಮದುವೆಗೆ ಸಮಯ ಬೇಕಾಗಿ ಬಂದಲ್ಲಿ ಎಂಬ ಕಾರಣಕ್ಕೆ ಹಾಗೆ ಹೇಳಲಾಗಿದೆ. ಇನ್ನು ಶಿಕ್ಷೆಯ ಅವಧಿಯನ್ನು ಕೂಡ ಕಡಿಮೆ ಮಾಡುವುದಿಲ್ಲ. ಹತ್ಯೆಗೆ ಪ್ರಚೋದಿಸುವವರಿಗೆ ಶಿಕ್ಷೆ ನೀಡಲು ವಿಧೇಯಕಲ್ಲಿ ಪ್ರಸ್ತಾಪಿಸಲಾಗಿದೆ. ಆದಾಗ್ಯೂ ತಾವು ನೀಡಿರುವ ಸಲಹೆಯಂತೆ ವಿಧೇಯಕ್ಕೆ ತಿದ್ದುಪಡಿ ತರಲಾಗುವುದೆಂದರು.

ಹಾಗಾಗಿ ತಿದ್ದುಪಡಿಯೊಂದಿಗೆ ಈ ವಿಧೇಯಕವು ಅನುಮೋದನೆಗೊಂಡಿದೆ ಎಂದು ಸಭಾಧ್ಯಕ್ಷರು ಘೋಷಿಸಿದರು.

ಈ ವಿಧೇಯಕದ ಪ್ರಕಾರ ಅಂತರ್ಜಾತಿ ವಿವಾಹವಾಗಲು ಉದ್ದೇಶಿಸುವ ಜೋಡಿಗಳು  ಜಿಲ್ಲಾ ದಂಡಾಧಿಕಾರಿ ಅಥವಾ ಈ ಉದ್ದೇಶಕ್ಕಾಗಿ ಜಿಲ್ಲಾ ದಂಡಾಧಿಕಾರಿಯು ಗೊತ್ತುಪಡಿಸಿದ ನೋಡಲ್ ಅಧಿಕಾರಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ಘೋಷಿಸಿಕೊಳ್ಳಬೇಕು. ಅವರು ಸದರಿ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಕಳುಹಿಸುತ್ತಾರೆ. ಆಗ ಈ ಜೋಡಿಯ ವಿರುದ್ಧ, ಕುಟುಂಬ ಸದಸ್ಯರು, ಸಂಬಂಧಿಕರು ಅಥವಾ ಸಮುದಾಯ ಸದಸ್ಯರನ್ನೂ ಒಳಗೊಂಡಂತೆ ಯಾರೇ ಇತರ ವ್ಯಕ್ತಿಯ ಸೂಚನೆಯ ಮೇರೆಗೆ ಪೊಲೀಸ್ ಅಥವಾ ಯಾರೇ ಇತರ ಅಧಿಕಾರಿಯು ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ.ಹಾಗೆಯೇ  ಅವರ ಕುಟುಂಬ ಅಥವಾ ಅವರ ಸಂಬಂಧಿಕರನ್ನು ಅವರು ವಾಸಿಸುವ ಸ್ಥಳದಿಂದ ಬಲವಂತವಾಗಿ ಹೊರ ಹಾಕುವುದು ಅಥವಾ ಬಹಿಷ್ಕಾರಿಸುವಂತಿಲ್ಲ.

 


Share this with Friends

Related Post