ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಾಣಿಜ್ಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ತೀವ್ರ ಅಭಾವದಿಂದ ಕಂಗೆಟ್ಟಿದ್ದ ರಾಜ್ಯದ ಹೋಟೆಲ್ ಉದ್ಯಮಕ್ಕೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಅನಿಲ ಪೂರೈಕೆಯ ಪ್ರಮಾಣವನ್ನು ಶೇ. 50ಕ್ಕೆ ಹೆಚ್ಚಿಸುವ ಮೂಲಕ ಸಂಕಷ್ಟದಲ್ಲಿದ್ದ ಮಾಲೀಕರಿಗೆ ‘ಆಕ್ಸಿಜನ್’ ನೀಡಿದಂತಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಂತಹ ಪರಿಸ್ಥಿತಿಯಿಂದಾಗಿ ಆಮದು ವ್ಯತ್ಯಯಗೊಂಡು ಅನಿಲ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋಟೆಲ್‌ಗಳು, ಪಿಜಿಗಳು ಮತ್ತು ಕೈಗಾರಿಕಾ ಕ್ಯಾಂಟೀನ್‌ಗಳು ಅಡುಗೆ ಅನಿಲ ಸಿಗದೆ ಪರದಾಡುತ್ತಿದ್ದವು. ಈ ಮೊದಲು ಶೇ. 30ರಷ್ಟು ಮಾತ್ರ ಪೂರೈಕೆಯಾಗುತ್ತಿದ್ದ ಅನಿಲವನ್ನು, ಈಗ ಹೆಚ್ಚುವರಿ ಶೇ. 20ರಷ್ಟು ಸೇರಿಸಿ ಒಟ್ಟು ಶೇ. 50ಕ್ಕೆ ಏರಿಸಲು ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ₹150 ಕೋಟಿ ನಷ್ಟ:
ಅನಿಲ ಅಭಾವದಿಂದಾಗಿ ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಕ್ಕೆ ಸುಮಾರು 150 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ನಗರದಲ್ಲಿ ದಿನಕ್ಕೆ ಸುಮಾರು 50,000 ಸಿಲಿಂಡರ್‌ಗಳ ಬೇಡಿಕೆ ಇದ್ದರೂ, ಪೂರೈಕೆ ಕೇವಲ 1,000ಕ್ಕೆ ಇಳಿದಿತ್ತು. ಇದರಿಂದಾಗಿ ಅನಿವಾರ್ಯವಾಗಿ ಹಲವು ಹೋಟೆಲ್‌ಗಳು ಮೆನುವಿನಲ್ಲಿದ್ದ ತಿಂಡಿಗಳನ್ನು ಕಡಿತಗೊಳಿಸಿದ್ದವು.
ಬೆಲೆ ಏರಿಕೆಯ ಬರೆ:
ಪೂರೈಕೆ ಪ್ರಮಾಣ ಹೆಚ್ಚಳವಾದರೂ, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ರಿಯಾಯಿತಿ ಕಡಿತದಿಂದಾಗಿ ಸುಮಾರು ₹265 ರಷ್ಟು ಹೊರೆ ಬಿದ್ದಿದೆ. ಇದು ಹೋಟೆಲ್ ಮಾಲೀಕರಲ್ಲಿ ಆತಂಕ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಅನಿಲ ಲಭ್ಯತೆಯಿಂದಾಗಿ ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲು ಸಜ್ಜಾಗಿವೆ.

