Tue. Nov 10th, 2026

ಮುಂದಿನ ಸಂಪುಟದಲ್ಲಿ ರಾಜ್ಯದ ಸಮಗ್ರ ವಿಮಾನಯಾನ ನೀತಿ ಮಂಡನೆ: ಸಚಿವ ಎಂ.ಬಿ. ಪಾಟೀಲ್

Share this with Friends

ಬೆಂಗಳೂರು: ನಾಗರಿಕ ವಿಮಾನಯಾನ ಕ್ಷೇತ್ರದ ವ್ಯವಸ್ಥಿತ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ನೂತನ ಸಮಗ್ರ ವಿಮಾನಯಾನ ನೀತಿಯನ್ನು ಸಿದ್ಧಪಡಿಸಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರವೇ ನೇರವಾಗಿ ನಿರ್ವಹಿಸಲಿರುವ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ಅನುದಾನ ಹಂಚಿಕೆ ಮತ್ತು ವಿಜಿಎಫ್ (Viability Gap Funding) ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ. ಇದು ಇಡೀ ದೇಶಕ್ಕೆ ಮಾದರಿಯಾಗುವಂತಹ ನೀತಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡಾನ್ ಯೋಜನೆಯ ವೈಫಲ್ಯದಿಂದಲೇ ಸೇವೆ ಸ್ಥಗಿತ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳು ಸ್ಥಗಿತಗೊಂಡಿರುವುದಕ್ಕೆ ಕೇಂದ್ರ ಸರ್ಕಾರದ ‘ಉಡಾನ್-2’ ಯೋಜನೆಯಲ್ಲಿನ ದೋಷಗಳೇ ಕಾರಣ ಎಂದು ಸಚಿವರು ಆರೋಪಿಸಿದರು. “ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಲಾಗಿದ್ದು, ಈಗ ಹುಬ್ಬಳ್ಳಿ ನಿಲ್ದಾಣದ ಖಾಸಗೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಕೇಂದ್ರದ ಸುಪರ್ದಿಗೆ ಒಪ್ಪಿಸಿದರೂ, ಅದರಿಂದ ರಾಜ್ಯಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ಈ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಬೇಕು” ಎಂದು ತಿರುಗೇಟು ನೀಡಿದರು.

ಉಡಾನ್ ಯೋಜನೆಯ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಹಾಗೂ ನಂತರದ 5 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50:50 ವೆಚ್ಚದ ಅನುಪಾತದಲ್ಲಿ ಯೋಜನೆಯನ್ನು ಮುಂದುವರಿಸಬೇಕು ಎಂಬ ರಾಜ್ಯದ ಸಲಹೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ. ಈ ಉದಾಸೀನತೆಯಿಂದಾಗಿ ದೇಶಾದ್ಯಂತ 17 ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿವೆ ಎಂದು ಅವರು ದೂರಿದರು.

ರಾಜ್ಯದ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಕೇಂದ್ರಕ್ಕೆ ವಹಿಸಿಕೊಡುವುದು ಸರಿಯಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ, ರಾಯಚೂರು ಮತ್ತು ವಿಜಯಪುರ ನಿಲ್ದಾಣಗಳನ್ನು ರಾಜ್ಯವೇ ನಿರ್ವಹಿಸುತ್ತಿದೆ. ಕಲಬುರಗಿ ನಿಲ್ದಾಣಕ್ಕೆ ಕೆಕೆಆರ್‌ಡಿಬಿಯಿಂದ ಶೇ. 80 ಮತ್ತು ರಾಜ್ಯ ಸರ್ಕಾರದಿಂದ ಶೇ. 20 ರಷ್ಟು ಅನುದಾನ ನೀಡಿ ಮತ್ತೆ ಸೇವೆ ಆರಂಭಿಸಲಾಗಿದೆ. ರಾಘವೇಂದ್ರ ಅವರಿಗೆ ಸಾಮರ್ಥ್ಯವಿದ್ದರೆ ಶಿವಮೊಗ್ಗ ನಿಲ್ದಾಣಕ್ಕೂ ಇದೇ ರೀತಿ ಹಣ ತರಲಿ ಎಂದು ಸವಾಲು ಹಾಕಿದರು.

ಎಥೆನಾಲ್ ಗೊಂದಲಕ್ಕೆ ನಿತಿನ್ ಗಡ್ಕರಿ ಕಾರಣ

ಪೆಟ್ರೋಲ್‌ನಲ್ಲಿ ಮಿತಿಮೀರಿ ಎಥೆನಾಲ್ ಮಿಶ್ರಣ ಮಾಡುವ ಕೇಂದ್ರದ ನಿರ್ಧಾರದಿಂದ ದೊಡ್ಡ ಅನಾಹುತವಾಗುತ್ತಿದ್ದು, ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಹೊಣೆ ಎಂದು ಪಾಟೀಲ್ ಆರೋಪಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇವೆಲ್ಲವನ್ನೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಇಡೀ ಪ್ರಕ್ರಿಯೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

“ಎಥೆನಾಲ್ ಕುರಿತು ನಾನು ಹೇಳುವ ಸತ್ಯದ ಮೇಲೆ ಅನುಮಾನವಿದ್ದರೆ, ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಮುರುಗೇಶ್ ನಿರಾಣಿ ಮತ್ತು ಪ್ರಭಾಕರ್ ಕೋರೆ ಅವರನ್ನೇ ಕೇಳಿ ತಿಳಿಯಲಿ. ನಾವು ಪೆಟ್ರೋಲ್ ಮಾದರಿಗಳನ್ನು ಕೇಂದ್ರ ಸರ್ಕಾರದ ಪ್ರಯೋಗಾಲಯಗಳಿಗೇ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದ ಬಂದ ವರದಿಯನ್ನೇ ಅವರು ಅನುಮಾನಿಸುತ್ತಿರುವುದು ಏಕೆ?” ಎಂದು ಪ್ರಶ್ನಿಸಿದರು.

ದೇಶದಲ್ಲಿ ಎಥೆನಾಲ್ ಸಂಗ್ರಹ ಮಿತಿ ಮೀರಿದ್ದು, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಇದೆ. ಎಥೆನಾಲ್ ಉತ್ಪಾದನೆಗೆ ವಿಪರೀತ ಪ್ರೋತ್ಸಾಹ ನೀಡಿದ ಕೇಂದ್ರ ಸರ್ಕಾರ, ಅದರ ಖರೀದಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಆರಂಭದಲ್ಲಿ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಿತ್ತು. ಆದರೆ, ಗಡ್ಕರಿ ಅವರು ಏಕಾಏಕಿ ಈ ವ್ಯವಸ್ಥೆಯನ್ನು ಹೇರಿದ್ದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವಿಸಿವೆ ಎಂದು ಅವರು ದೂರಿದರು.


Share this with Friends

Related Post