ತುಮಕೂರು: ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾದುದು. ರೋಗಿಗಳಿಗೆ ನೆಮ್ಮದಿ ನೀಡಿ ಅವರ ಜೀವ ಉಳಿಸುವ ಶಕ್ತಿ ಕೇವಲ ವೈದ್ಯರಿಗೆ ಮಾತ್ರ ಇದೆ. ಹೀಗಾಗಿ ಆರ್ಥಿಕ ಒತ್ತಡಗಳ ನಡುವೆಯೂ ಬಡ ಜನರ ಬಗ್ಗೆ ಕರುಣೆ ಹಾಗೂ ಸೇವಾ ಮನೋಭಾವವನ್ನು ವೈದ್ಯರು ಎಂದಿಗೂ ಬಿಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿವಿಮಾತು ಹೇಳಿದರು.
ನಗರದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಮತ್ತು ಹಾಸ್ಪಿಟಲ್ ಬೋರ್ಡ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ‘ನ್ಯಾಷನಲ್ ಕಾನ್ಫರೆನ್ಸ್-2026’ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ:
ವೈದ್ಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರವು ಅತಿಯಾದ ವಾಣಿಜ್ಯೀಕರಣಕ್ಕೆ ಒಳಗಾಗುತ್ತಿದೆ. ಆಸ್ಪತ್ರೆಗಳಲ್ಲಿನ ಟಾರ್ಗೆಟ್ ಸಂಸ್ಕೃತಿಯಿಂದ ವೈದ್ಯರು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಅಲ್ಲದೆ, ನಿಮ್ಮ ತಪ್ಪಿಲ್ಲದಿದ್ದರೂ ರೋಗಿಗಳ ಕಡೆಯಿಂದ ಎದುರಾಗುವ ದೂರುಗಳು ಹಾಗೂ ದೌರ್ಜನ್ಯಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ವೈದ್ಯರ ರಕ್ಷಣೆಗಾಗಿ ಈಗಾಗಲೇ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ” ಎಂದರು.
ನಿಯಮಗಳ ಸರಳೀಕರಣ:
ವೈದ್ಯರ ಬಹುದಿನದ ಬೇಡಿಕೆಯಾದ ಫೈರ್ ಲೈಸೆನ್ಸ್ ಸಮಸ್ಯೆಗೆ ಸಚಿವ ಡಾ. ಜಿ. ಪರಮೇಶ್ವರ ಅವರೊಂದಿಗೆ ಚರ್ಚಿಸಿ ಪರಿಹಾರ ನೀಡಲಾಗಿದೆ. ಕೆಪಿಎಂಎ (KPME) ನೋಂದಣಿ ಪ್ರಕ್ರಿಯೆಯಲ್ಲೂ ಮಹತ್ವದ ಬದಲಾವಣೆ ತರಲಾಗಿದ್ದು, ಕ್ಲಿನಿಕ್ ಆರಂಭಿಸಿದ ಆರು ತಿಂಗಳ ಒಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುವ ಮೂಲಕ ಅನಗತ್ಯ ತೊಂದರೆಗಳನ್ನು ತಪ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಏಕರೂಪ ಚಿಕಿತ್ಸಾ ದರಕ್ಕೆ ಚಿಂತನೆ:
ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ವಿಧಿಸುವ ದರಗಳಲ್ಲಿನ ವ್ಯತ್ಯಾಸವನ್ನು ಸರಿಪಡಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪ್ರತಿಯೊಂದು ಆಸ್ಪತ್ರೆಯಲ್ಲಿ ಬೇರೆ ಬೇರೆ ದರಪಟ್ಟಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಐಎಂಎ ಜೊತೆ ಚರ್ಚಿಸಿ ಒಂದು ನಿರ್ದಿಷ್ಟ ಮಾನದಂಡ ರೂಪಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಸಚಿವರು ತಿಳಿಸಿದರು.
ಈ ಎರಡು ದಿನಗಳ ಸಮ್ಮೇಳನವು ಆರೋಗ್ಯ ಕ್ಷೇತ್ರದಲ್ಲಿನ ಹಲವಾರು ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

