ಬೆಂಗಳೂರು/ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯ ತಮಿಳುನಾಡು ಮತ್ತೊಮ್ಮೆ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಜಲಾಶಯ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕರ್ನಾಟಕದ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು (DPR) ತಕ್ಷಣವೇ ತಿರಸ್ಕರಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಿದೆ ಎಂಬ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ತಮಿಳುನಾಡು ಈ ಕಠಿಣ ಹೆಜ್ಜೆ ಇಟ್ಟಿದೆ.
ಪತ್ರದಲ್ಲಿ ತಮಿಳುನಾಡು ಸಿಎಂ ಉಲ್ಲೇಖಿಸಿರುವ ಪ್ರಮುಖ ಅಂಶಗಳು:
ನ್ಯಾಯಾಲಯದ ತೀರ್ಪಿನ ಉಲ್ಲಂಘನೆ: ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಹೊಸ ಜಲಾಶಯ ನಿರ್ಮಿಸಲು ಹೊರಟಿರುವುದು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ವಿವಾದಗಳ ನ್ಯಾಯಾಧಿಕರಣ (CWDT) ನೀಡಿರುವ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ವಾದಿಸಲಾಗಿದೆ.
ರೈತರ ಹಿತಾಸಕ್ತಿಗೆ ಧಕ್ಕೆ: ಕಾವೇರಿ ನದಿಯನ್ನೇ ಜೀವನೋಪಾಯಕ್ಕಾಗಿ ನಂಬಿಕೊಂಡಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ಕರ್ನಾಟಕದ ಈ ನಡೆ ತೀವ್ರ ಆತಂಕ ಮೂಡಿಸಿದೆ ಎಂದು ವಿಜಯ್ ಉಲ್ಲೇಖಿಸಿದ್ದಾರೆ.
ಡಿಪಿಆರ್ ತಿರಸ್ಕರಿಸಲು ಮನವಿ: ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕೇಂದ್ರ ಜಲ ಆಯೋಗವು (CWC) ಯಾವುದೇ ಕಾರಣಕ್ಕೂ ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಬಾರದು ಮತ್ತು ಅವರ ಡಿಪಿಆರ್ ಅನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಪ್ರಧಾನಿಗಳನ್ನು ಕೋರಿದ್ದಾರೆ.
ಸಹ-ರಾಜ್ಯಗಳ ಒಪ್ಪಿಗೆ ಕಡ್ಡಾಯ: ನದಿ ಪಾತ್ರದ ಇತರ ರಾಜ್ಯಗಳ ಪೂರ್ವಾನುಮತಿ ಇಲ್ಲದೆ ಕರ್ನಾಟಕ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕಾನೂನು ಹೋರಾಟಕ್ಕೆ ಸಜ್ಜಾದ ತಮಿಳುನಾಡು:
ಪತ್ರ ಬರೆಯುವ ಮುನ್ನ ತಮಿಳುನಾಡು ಸಿಎಂ ವಿಜಯ್ ಅವರು ಚೆನ್ನೈನ ಸಚಿವಾಲಯದಲ್ಲಿ ಕಾವೇರಿ ನದಿ ನೀರು ತಜ್ಞರು ಮತ್ತು ಉನ್ನತ ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಕರ್ನಾಟಕದ ಮೇಕೆದಾಟು ಕಾಮಗಾರಿ ಜಾರಿಯಾದರೆ, ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಸುತ್ತಿನ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರವು ಮೇಕೆದಾಟು ಯೋಜನೆ ಜಾರಿಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ, ಅತ್ತ ತಮಿಳುನಾಡಿನ ಹೊಸ ಸರ್ಕಾರ ಕೇಂದ್ರದ ಮೂಲಕ ಇದಕ್ಕೆ ತಡೆ ಒಡ್ಡಲು ಮುಂದಾಗಿರುವುದು ಕಾವೇರಿ ವಿವಾದವನ್ನು ಮತ್ತೆ ಮುಂಚೂಣಿಗೆ ತಂದಿದೆ.

