ಬೆಂಗಳೂರು: “ಸಕಲೇಶಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಾನು ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಲಂಚ ಕೊಡಬೇಡಿ, ಕೆಲಸ ಮುಗಿದ ನಂತರ ಅಧಿಕಾರಿಗಳಿಗೆ ಗೌರವ ಸಲ್ಲಿಸಿ ಎಂದು ಹೇಳಿದ್ದೆ. ನನ್ನದು ಅಪ್ಪಟ ಗ್ರಾಮೀಣ ಆಡುಭಾಷೆಯಾಗಿದ್ದರಿಂದ ‘ಗೌರವ’ ಎಂಬ ಪದ ಬಳಕೆಯನ್ನೇ ಕೆಲವರು ಲಂಚ ಎಂಬ ಅರ್ಥದಲ್ಲಿ ತಪ್ಪಾಗಿ ಬಿಂಬಿಸಿ, ನನ್ನ ಶ್ರಮವನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ” ಎಂದು ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಮ್ಮ ರಾಜಕೀಯ ಜೀವನದ ಪ್ರಾಮಾಣಿಕತೆಯನ್ನು ಒತ್ತಿ ಹೇಳಿದ ಅವರು, “ನನ್ನ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕಿಯಿಲ್ಲ. ಸಕಲೇಶಪುರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಿರಂತರವಾಗಿ ಕುಳಿತು 400ಕ್ಕೂ ಹೆಚ್ಚು ಜನರ ಅಹವಾಲುಗಳನ್ನು ಆಲಿಸಿದ್ದೇನೆ. ವಿಧಾನಸೌಧದ ಪ್ರಶ್ನೋತ್ತರ ಮಾದರಿಯಲ್ಲಿ ಒಂದು ಬದಿಗೆ ಅಧಿಕಾರಿಗಳು, ಮತ್ತೊಂದು ಬದಿಗೆ ಜನರನ್ನು ನಿಲ್ಲಿಸಿ ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ್ದೇನೆ. ಈ ಭಾರಿ ಯಶಸ್ವಿ ಕಾರ್ಯಕ್ರಮದ ತೃಪ್ತಿಯ ನಡುವೆಯೂ, ವಿರೋಧ ಪಕ್ಷದವರು ಒಂದು ಸಣ್ಣ ಪದವನ್ನು ಹಿಡಿದು ವಿವಾದ ಮಾಡುತ್ತಿರುವುದು ನನ್ನ ಹೃದಯಕ್ಕೆ ಭಾರ ತಂದಿದೆ” ಎಂದು ವ್ಯಥೆ ಹಂಚಿಕೊಂಡರು.
ಲಂಚದ ಹಣ ವಾಪಸ್ ಕೊಡಿಸಲು ಕ್ರಮ:
ಕಾರ್ಯಕ್ರಮದ ವೇಳೆ ಸರ್ವೆ ಇಲಾಖೆಯಲ್ಲಿ 2 ಲಕ್ಷ ರೂಪಾಯಿ ಲಂಚ ಪಡೆದಿರುವ ಕುರಿತು ಸಾರ್ವಜನಿಕರ ಗುಂಪೊಂದು ದೂರು ತಂದಿತ್ತು. ಈ ವಿಷಯದ ಕುರಿತು ಮಾತನಾಡಿದ ಸಚಿವರು, “ಲಂಚ ಕೊಟ್ಟಿದ್ದೇನೆ ಎಂದ ವ್ಯಕ್ತಿಯ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದ್ದೇನೆ. ಈಗಾಗಲೇ ಲಂಚದ ರೂಪದಲ್ಲಿ ಅಧಿಕಾರಿಗಳು ಪಡೆದಿರುವ ಹಣವನ್ನು ವಾಪಸ್ ಕೊಡಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಒಂದು ರೂಪಾಯಿ ಲಂಚ ಕೊಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಕೆಲಸ ಮುಗಿದ ಮೇಲೆ ಕೃತಜ್ಞತೆ ಸಲ್ಲಿಸುವುದು ಸನ್ನಡತೆ:
ಫಲಾನುಭವಿಗಳು ಹಾಗೂ ಅಧಿಕಾರಿಗಳ ನಡುವೆ ಅನಗತ್ಯ ಸಂಘರ್ಷ ಬೇಡ ಎಂಬ ಉದ್ದೇಶ ನನ್ನದಾಗಿತ್ತು. ನಮ್ಮ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಟ್ಟವರಿಗೆ ಕೃತಜ್ಞತೆ ಅಥವಾ ಧನ್ಯವಾದ ರೂಪದಲ್ಲಿ ಗೌರವ ಸಲ್ಲಿಸುವುದು ನಮ್ಮ ಧರ್ಮ ಮತ್ತು ಸನ್ನಡತೆಯಾಗಿದೆ ಎಂದು ನಾನು ಹೇಳಿದ್ದೆ. ಆದರೆ ನಾನು ‘ಗೌರವ ಕೊಡಿ’ ಎಂದ ತಕ್ಷಣ ಲಂಚ ಕೊಡಬೇಕೆ ಎಂದು ಕೆಲವರು ಗಲಾಟೆ ಎಬ್ಬಿಸಿದರು. ಸಾರ್ವಜನಿಕರು ಲಂಚ ಮುಕ್ತವಾಗಿ ಆಡಳಿತ ಸೌಲಭ್ಯ ಪಡೆಯಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದು, ಇಂತಹ ಅಪಪ್ರಚಾರಗಳಿಗೆ ನಾಗರಿಕರು ಕಿವಿಗೊಡಬಾರದು ಎಂದು ಸಚಿವರು ವಿನಂತಿಸಿದರು.

