ನಾಗಪುರ: ವಿಶ್ವದಾದ್ಯಂತ ಮಾನವೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಧ್ವಂಸಗೊಳಿಸಲು ಪಶ್ಚಿಮ ದೇಶಗಳಿಂದ ಆಸುರೀ ಶಕ್ತಿಗಳ ಬಿರುಗಾಳಿ ಬೀಸುತ್ತಿದ್ದು, ಈ ದುಷ್ಟ ಸಂಚುಗಳಿಗೆ ಭಾರತ ಮತ್ತು ಇಲ್ಲಿನ ಹಿಂದು ಸಮಾಜವೇ ಪ್ರಬಲ ಸ್ಪರ್ಧಿಯಾಗಿದ್ದು ನಿರ್ಣಾಯಕ ಗುರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿ ಆಯೋಜಿಸಲಾಗಿದ್ದ ಸಂಘದ ಶತಾಬ್ಬಿ ವರ್ಷದ ಸಮಾರೋಪದ ವಿಜಯದಶಮಿ ಉತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ದೇಶ ವಿಭಜಿಸುವ ಕುತಂತ್ರಗಳ ವಿರುದ್ಧ ಎಚ್ಚರಿಕೆ:
ಜಾಗತಿಕವಾಗಿ ಅರಾಜಕತೆ ಸೃಷ್ಟಿಸಿ ತಮ್ಮ ಸ್ವಾರ್ಥಕ್ಕಾಗಿ ಕೈಗೊಂಬೆಗಳನ್ನು ಪ್ರಭಾವಿ ಸ್ಥಾನದಲ್ಲಿ ಕೂರಿಸಲು ಯತ್ನಿಸುವ ಶಕ್ತಿಗಳ ಆಟಕ್ಕೆ ಭಾರತದ ಇತ್ತೀಚಿನ ಪ್ರಗತಿಯು ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಆರ್ಎಸ್ಎಸ್, ಹಿಂದು ಸಮಾಜ ಮತ್ತು ಭಾರತವನ್ನು ವಿಭಜಿಸಲು ನಿರಂತರ ಷಡ್ಯಂತ್ರಗಳು ನಡೆಯುತ್ತಿವೆ. ಕ್ಷುಲ್ಲಕ ರಾಜಕೀಯ ಲಾಭ ಹಾಗೂ ಮತಗಳ ಆಮಿಷಕ್ಕಾಗಿ ಕೆಲವು ಮಹತ್ವಾಕಾಂಕ್ಷಿ ರಾಜಕೀಯ ನಾಯಕರು ಇಂತಹ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು. ಸಮಾಜದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳ ತಂದಿಡುವ ಮತ್ತು ಅನ್ಯಾಯಗ್ರಸ್ತತೆಯ (Victimhood) ಭಾವನೆ ಬಿತ್ತಿ ದೇಶದ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಹುಟ್ಟಿಸುವ ವಿಭಜಕ ಪ್ರವೃತ್ತಿಗಳಿಂದ ಸಾರ್ವಜನಿಕರು ಸದಾ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.
ವಿವೇಚನಾರಹಿತ ‘ಓಟಿಟಿ’ ನಿಯಂತ್ರಣಕ್ಕೆ ಆಗ್ರಹ:
ಆಧುನಿಕ ತಂತ್ರಜ್ಞಾನ ಮತ್ತು ಸೋಶಿಯಲ್ ಮೀಡಿಯಾದಿಂದಾಗಿ ಯುವ ಪೀಳಿಗೆಗೆ ಮಾಹಿತಿ ಸುಲಭವಾಗಿ ಸಿಗುತ್ತಿದ್ದರೂ, ಯಾವುದು ಸೂಕ್ತ ಮತ್ತು ಯಾವುದು ಅಸಹ್ಯ ಎಂಬುದನ್ನು ವಿವೇಚಿಸುವ ಶಕ್ತಿ ಕುಂದುತ್ತಿದೆ. ವಿಶೇಷವಾಗಿ ‘ಓಟಿಟಿ’ (OTT) ವೇದಿಕೆಗಳ ಅತಿರೇಕದ ಮೇಲೆ ನಿಬರ್ಂಧಗಳನ್ನು ಹೇರಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವನ್ನು ಇಡೀ ಸಮಾಜ ಗುರುತಿಸಿದೆ. ಯುವಕರು ಮಾರಕ ಮಾದಕ ವಸ್ತುಗಳ ದಾಸರಾಗುತ್ತಿರುವುದು ಗಂಭೀರ ರಾಷ್ಟ್ರೀಯ ಸಮಸ್ಯೆಯಾಗಿದ್ದು, ಇದರ ವಿರುದ್ಧ ದೇಶವ್ಯಾಪಿ ಆಂದೋಲನ ರೂಪಿಸಬೇಕಿದೆ ಎಂದರು.
ಶತಾಬ್ಬಿ ಸಾಧನೆಯ ಹೆಜ್ಜೆಗಳು:
ಸಂಘದ 100 ವರ್ಷಗಳ ಸುದೀರ್ಘ ಪಯಣದಲ್ಲಿ ಸಮಾಜ ಸಂಘಟನೆಯ ವಿಸ್ತಾರಕ್ಕಾಗಿ ಬೃಹತ್ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗೃಹ ಸಂಪರ್ಕ ಅಭಿಯಾನದ ಮೂಲಕ ದೇಶದ 4,61,527 ಹಳ್ಳಿಗಳು ಹಾಗೂ 41,076 ವಸತಿ ಪ್ರದೇಶಗಳ ಒಟ್ಟು 10 ಕೋಟಿಗೂ ಅಧಿಕ (10,19,88,511) ಮನೆಗಳನ್ನು ತಲುಪಲಾಗಿದೆ. ಇದಲ್ಲದೆ ನಾಗರಿಕ ಗೋಷ್ಠಿ, ಸದ್ಭಾವನಾ ಬೈಠಕ್, ಹಿಂದು ಸಮ್ಮೇಳನ ಮತ್ತು ಯುವ ಸಮಾವೇಶಗಳ ಮೂಲಕ ಕೋಟ್ಯಂತರ ಜನರನ್ನು ಜಾಗೃತಗೊಳಿಸಲಾಗಿದೆ.
ಇದೇ ವೇಳೆ ಸಂತ ಶಿರೋಮಣಿ ರವಿದಾಸಜೀ ಮಹಾರಾಜ್ ಅವರ 650ನೇ ಜಯಂತಿ, ಪೂಜ್ಯ ಸ್ವಾಮಿ ಶ್ರದ್ದಾನಂದರ ಬಲಿದಾನದ ಶತಮಾನೋತ್ಸವ, ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಜನ್ಮ ಶತಮಾನೋತ್ಸವ ಮತ್ತು ಶ್ರೀ ರಾಜ್ ನಾರಾಯಣ್ ಬಸು ಅವರ 200ನೇ ಜಯಂತಿಯನ್ನು ಸ್ಮರಿಸಿದ ಮೋಹನ್ ಭಾಗವತ್ ಅವರು, ಭಾರತೀಯತೆಯನ್ನು ಉಳಿಸಲು ಸಂವಿಧಾನದ ಚೌಕಟ್ಟಿನಲ್ಲೇ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ ಮತ್ತು ಪರಿಸರ ಸಂರಕ್ಷಣೆಯಂತಹ ‘ಪಂಚ ಪರಿವರ್ತನೆ’ಗಳನ್ನು ಚಾರಿತ್ರ್ಯವನ್ನಾಗಿಸಿಕೊಳ್ಳಲು ಕರೆ ನೀಡಿದರು.

