ಬೆಂಗಳೂರು: ಭಾರತದ ಮುಂಚೂಣಿ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಪುತ್ರ ಅನಂತ್ ಅಂಬಾನಿ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪ್ರಸಿದ್ಧ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಆಶ್ರಮದ 45ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅಂಬಾನಿ ತಂದೆ-ಮಗ, ಆಧ್ಯಾತ್ಮಿಕ ಗುರುಗಳಾದ ಪೂಜ್ಯ ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಆಶ್ರಮದ ಆವರಣದಲ್ಲಿ ಕೆಲಕಾಲ ಕಳೆದ ಅವರು, ಅಲ್ಲಿನ ಪ್ರಶಾಂತ ವಾತಾವರಣ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಳತೆ ಮೆರೆದ ಬಿಲಿಯನೇರ್‌ಗಳು
ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದರೂ ತಂದೆ-ಮಗ ಇಬ್ಬರೂ ಆಶ್ರಮದಲ್ಲಿ ಅತ್ಯಂತ ಸರಳವಾಗಿ ನಡೆದುಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಭಾರತೀಯ ಸನಾತನ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ಕಲ್ಯಾಣದ ಕೆಲಸಗಳಿಗೆ ಅಂಬಾನಿ ಕುಟುಂಬ ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಸಮಾಜದ ಉನ್ನತಿಗೆ ಶ್ರಮಿಸುವ ಸಂಘಟನೆಗಳಿಗೆ ಬೆಂಬಲ ನೀಡುವ ಬದ್ಧತೆಯನ್ನು ಅವರು ಈ ಭೇಟಿಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಆಶ್ರಮದಲ್ಲಿ 45ನೇ ವಾರ್ಷಿಕೋತ್ಸವದ ಸಡಗರ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ 45 ಯಶಸ್ವಿ ವರ್ಷಗಳನ್ನು ಪೂರೈಸಿದ್ದು, ಇದರ ಅಂಗವಾಗಿ ಆಶ್ರಮದಲ್ಲಿ ತಿಂಗಳ ಪರ್ಯಂತ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶ-ವಿದೇಶಗಳ ಗಣ್ಯರು, ಉದ್ಯಮಿಗಳು ಮತ್ತು ರಾಜಕಾರಣಿಗಳು ಬೆಂಗಳೂರಿನ ಆಶ್ರಮಕ್ಕೆ ಆಗಮಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಆಶ್ರಮದಲ್ಲಿ ಉತ್ತರ ಪ್ರದೇಶ ಮಹೋತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಹಬ್ಬಗಳು ಆಯೋಜನೆಗೊಂಡಿದ್ದು, ಸದ್ಯ ಅಂಬಾನಿ ಅವರ ಭೇಟಿ ಆಶ್ರಮದ ವಾರ್ಷಿಕೋತ್ಸವದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ.

