Sun. Oct 11th, 2026

ನಾಡಹಬ್ಬ ದಸರಾ ಉದ್ಘಾಟನೆ:ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ ಎಂದ ಗವಿಸಿದ್ದೇಶ್ವರ ಶ್ರೀಗಳು

Share this with Friends

ಮೈಸೂರು:ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರದ 2026ರ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕೊಪ್ಪಳದ ಶ್ರೀ ಮ. ನಿ. ಜ. ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, “ಒಂದು ಕಾಲದಲ್ಲಿ ರಾಜ-ಮಹಾರಾಜರ ಆಡಳಿತಕ್ಕೆ ಸೀಮಿತವಾಗಿದ್ದ ದೊರೆಯ ಹಬ್ಬವಾಗಿದ್ದ ದಸರಾ, ಇಂದು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಧರೆಯ ಹಬ್ಬವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರ ಈ ಉತ್ಸವದ ಯಶಸ್ಸಿನ ಹಿಂದೆ ಸಹಸ್ರಾರು ಶ್ರಮಿಕರ ಪರಿಶ್ರಮ ಅಡಗಿದೆ” ಎಂದು ಬಣ್ಣಿಸಿದರು.

ಜಾತಿಗಿಂತ ನೀತಿ ಮುಖ್ಯ, ಮಾನವ ಧರ್ಮವೇ ಶ್ರೇಷ್ಠ:

ದಸರಾ ಮಹೋತ್ಸವವು ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ತ್ರಿವೇಣಿ ಸಂಗಮವಾಗಿದೆ ಎಂದು ಅಭಿಪ್ರಾಯಪಟ್ಟ ಶ್ರೀಗಳು, “ಇಂದಿನ ಸಮಾಜದಲ್ಲಿ ಜಾತಿಯನ್ನು ಮುಂಚೂಣಿಗೆ ತಂದು ಒಡಕು ಮೂಡಿಸುವುದಕ್ಕಿಂತ, ನೀತಿಯನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ಗಟ್ಟಿಗೊಳಿಸಬೇಕಿದೆ. ಮನುಷ್ಯನನ್ನು ಪ್ರೀತಿಸುವುದೇ ನಿಜವಾದ ಮಾನವ ಧರ್ಮವಾಗಿದ್ದು, ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಇಂದಿಗೂ ಸಾರ್ವಕಾಲಿಕ ದಾರಿದೀಪವಾಗಿದೆ” ಎಂದರು. ಇದೇ ವೇಳೆ ಕರ್ನಾಟಕದ ಪ್ರಗತಿಯನ್ನು ರೈತರ ಬೆವರು, ಶ್ರಮಿಕರ ದುಡಿಮೆ, ವಿಜ್ಞಾನಿಗಳ ಮೇಧಾವಿತನ ಹಾಗೂ ಸಂತ-ಶರಣರ ಪ್ರಾರ್ಥನೆಗಳು ರೂಪಿಸಿವೆ ಎಂದು ಸ್ಮರಿಸಿದರಲ್ಲದೆ, ಸಾವಿರಾರು ಮಕ್ಕಳಿಗೆ ಅನ್ನ-ಅಕ್ಷರ ನೀಡಿದ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳ ತ್ಯಾಗಮಯ ಬದುಕು ನಮಗೆಲ್ಲ ಆದರ್ಶ ಎಂದರು.

ರಾಜಮನೆತನದ ತ್ಯಾಗ ಮತ್ತು ಕೃಷಿಯ ಮಹತ್ವ:

ಮೈಸೂರು ಪ್ರಗತಿಗೆ ರಾಜಮನೆತನ ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಗವಿಶ್ರೀಗಳು, ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ್ದು ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣಕ್ಕಾಗಿ ಮಹಾರಾಣಿ ಕೆಂಪರಾಜಮ್ಮಣ್ಣಿ ಅವರು ತಮ್ಮ ಒಡವೆಗಳನ್ನು ಒತ್ತೆಯಿಟ್ಟ ಐತಿಹಾಸಿಕ ತ್ಯಾಗದ ಪರಂಪರೆಯನ್ನು ಕೊಂಡಾಡಿದರು. ಪ್ರಸ್ತುತ ತಂತ್ರಜ್ಞಾನದ ಯುಗದ ಕುರಿತು ಮಾರ್ಮಿಕವಾಗಿ ಮಾತನಾಡಿದ ಅವರು, “ಇಂದು ಅಂತರ್ಜಾಲದಿಂದ ಎಲ್ಲವನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ, ನಮಗೆ ಹಸಿವು ನೀಗಿಸುವ ಅನ್ನ ಮತ್ತು ಸಾರನ್ನು ತಂತ್ರಜ್ಞಾನದಿಂದ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ರೈತನ ಕೃಷಿ ಶ್ರಮದಿಂದ ಮಾತ್ರವೇ ಆಹಾರ ಲಭ್ಯ. ಆದ್ದರಿಂದ ದೇಶ ಕೃಷಿ ಮತ್ತು ರೈತರನ್ನು ಗೌರವಿಸಬೇಕು” ಎಂದು ಕರೆ ನೀಡಿದರು.

ಪರಿಸರ ಮತ್ತು ಶಿಕ್ಷಣಕ್ಕೆ ಒತ್ತು ನೀಡಲು ಕರೆ:

ಕಾವೇರಿ, ಕೃಷ್ಣೆ, ತುಂಗಭದ್ರೆಯಂತಹ ಜೀವ ನದಿಗಳ ಸಂರಕ್ಷಣೆಗೆ ಸರ್ಕಾರಗಳು ಆದ್ಯತೆ ನೀಡಬೇಕು. ನೆಲ, ಜಲ ಮತ್ತು ಪರಿಸರ ರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚುವುದಕ್ಕಿಂತ ಸಮಾಜಕ್ಕೆ ನೆರಳಾಗುವ ಒಂದು ಗಿಡ ನೆಟ್ಟು ಬೆಳೆಸುವುದು ಪ್ರಕೃತಿಗೆ ಸಲ್ಲಿಸುವ ನಿಜವಾದ ಸೇವೆ ಎಂದರು. ಜೊತೆಗೆ, ಕಿತ್ತಳೆ ಹಣ್ಣು ಮಾರುತ್ತಲೇ ಶಾಲೆ ಕಟ್ಟಿ ಅಕ್ಷರ ದಾಸೋಹ ಮಾಡಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಉಲ್ಲೇಖಿಸಿದ ಶ್ರೀಗಳು, ಪ್ರತಿಯೊಬ್ಬರೂ ತಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ದಸರಾ ಕೇವಲ ಆಚರಣೆಯಾಗದೆ ಸಾಮರಸ್ಯ ಮತ್ತು ಮಾನವೀಯತೆಯ ಸಂಕೇತವಾಗಲಿ ಎಂದು ಹಾರೈಸಿದರು.

 

 


Share this with Friends

Related Post