ಮೈಸೂರು:ನಾಡಹಬ್ಬ ಮೈಸೂರು ದಸರಾ 2026ರ ಸಂಭ್ರಮದ ಭಾಗವಾಗಿ ತೋಟಗಾರಿಕೆ ಇಲಾಖೆಯ ವತಿಯಿಂದ ಇಲ್ಲಿನ ಲಿಂಗಾಬುಧಿ ಸಸ್ಯ ಶಾಸ್ತ್ರೀಯ ತೋಟದಲ್ಲಿ ಆಯೋಜಿಸಲಾಗಿರುವ “ಪುಷ್ಪಮೇಳ ಮತ್ತು ಸಸ್ಯತೋಟ ಭೇಟಿ” ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭಾನುವಾರ ಅದ್ಧೂರಿ ಚಾಲನೆ ನೀಡಿದರು. ಬಳಿಕ ಉದ್ಯಾನಕ್ಕೆ ಭೇಟಿ ನೀಡಿದ ಅವರು, ಈ ಬಾರಿಯ ವಿಶೇಷ ಪುಷ್ಪ ವಿನ್ಯಾಸಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಯನಮನೋಹರ ಪ್ರವೇಶ ದ್ವಾರ ಮತ್ತು ಗ್ಯಾಲರಿ:
ಈ ಬಾರಿಯ ಲಿಂಗಾಂಬುಧಿ ಸಸ್ಯೋದ್ಯಾನದ ಪ್ರವೇಶ ದ್ವಾರದಲ್ಲಿ ಗುಲಾಬಿ, ಸೇವಂತಿಗೆ ಹೂವುಗಳು ಹಾಗೂ ಅಲಂಕಾರಿಕ ಎಲೆಗಳನ್ನು ಬಳಸಿ ನಿರ್ಮಿಸಲಾಗಿರುವ ಬೃಹತ್ ಆನೆಗಳ ಪ್ರತಿಕೃತಿ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಇದರೊಂದಿಗೆ ಇಂಡೋನೇಷಿಯನ್ ತೆಂಗಿನ ಎಲೆ ಕಲಾಕೃತಿಯಾದ ‘ಬಾಲಿ ಶೈಲಿಯ ಜಾನೂರ್ ಕಲೆ’ಯ ಸ್ವಾಗತ ಕಮಾನು ವೀಕ್ಷಕರನ್ನು ಬರಮಾಡಿಕೊಳ್ಳುತ್ತಿದೆ. ಬಿದಿರಿನ ಪಟ್ಟಿಗಳು, ಬೆತ್ತದ ಉತ್ಪನ್ನಗಳನ್ನು ಬಳಸಿ ವಿಶೇಷ ಗ್ಯಾಲರಿ ನಿರ್ಮಿಸಲಾಗಿದ್ದು, ಬಿದಿರಿನ ಪ್ಲಾಂಟರ್ ಬಾಕ್ಸ್ಗಳಲ್ಲಿ ಅಂಥೋರಿಯಂ ಕುಂಡದ ಸಸ್ಯಗಳನ್ನು ಜೋಡಿಸಿ ಅಲಂಕರಿಸಲಾಗಿದೆ.
ವಿಶಿಷ್ಟ ಹೂವಿನ ವಾಕ್ ಹಾಗೂ ಉಷ್ಣವಲಯದ ಪ್ರದರ್ಶನ:
ಜಾನೂರ್ ತೆಂಗಿನ ಎಲೆಗಳ ನೇಯ್ಗೆ ಹಾಗೂ ಸೆಣಬಿನಿಂದ ಕಂಬಗಳನ್ನು ಅಲಂಕರಿಸಿ ಆಕರ್ಷಕ ‘ಹೂವಿನ ವಾಕ್’ ನಿರ್ಮಿಸಲಾಗಿದೆ. ಮೇಲ್ಬಾವಣಿಯಲ್ಲಿ ಉಷ್ಣವಲಯದ ಹೂವುಗಳನ್ನು ನೇತುಹಾಕಲಾಗಿದ್ದು, ಆರ್ಕಿಡ್, ಅಡಿಕೆ ತಾಳೆ ಎಲೆಗಳ ನೇಯ್ಗೆ ಮತ್ತು ತಾಳೆ ಹಾಳೆಗಳನ್ನು ಬಳಸಿ ಹಾರ್ಟ್ ಮಾದರಿಯ ಕಮಾನುಗಳನ್ನು ಸೃಷ್ಟಿಸಲಾಗಿದೆ. ಇವುಗಳನ್ನು ಡೆಂಡೋಬಿಯಂ, ವಾಂಡಾ, ಮೊಕಾರಾ ಮತ್ತು ಫಲೇನೋಪ್ಪಿಸ್ ಆರ್ಕಿಡ್ಗಳಿಂದ ಅಲಂಕರಿಸಿ ಸೃಜನಾತ್ಮಕವಾಗಿ ಪ್ರದರ್ಶಿಸಲಾಗಿದೆ.
ಚಾವುಂಡರಾಯ ಬಸದಿ ಮತ್ತು ಬಾಹುಬಲಿ ಪ್ರತಿಮೆ:
ಕರ್ನಾಟಕದ ಪುರಾತನ ಗಂಗ ಸಾಮ್ರಾಜ್ಯದ ಮಹಾ ದಂಡನಾಯಕ ಹಾಗೂ ಮಂತ್ರಿ ಚಾವುಂಡರಾಯನ ಬಸದಿಯ ಪ್ರತಿಕೃತಿಯನ್ನು ಥರ್ಮೋಕೋಲ್ ಬಳಸಿ ನೈಸರ್ಗಿಕ ಕಲ್ಲಿನ ಫಿನಿಷಿಂಗ್ನೊಂದಿಗೆ ಪುರಾತನ ರೂಪದಲ್ಲಿ ಮರುಸೃಷ್ಟಿಸಲಾಗಿದೆ. ಬಸದಿಯ ಸುತ್ತಲೂ ಮಿನಿ ಜರ್ಬೆರಾ ಹೂವಿನ ಪಟ್ಟಿಗಳ ಅಲಂಕಾರವಿದ್ದು, ಅದರ ಪಕ್ಕದಲ್ಲೇ ಕಲ್ಲಿನ ಫಿನಿಷ್ ಹೊಂದಿರುವ ವೇದಿಕೆಯ ಮೇಲೆ ಶಾಂತಿ, ಅಹಿಂಸೆ ಹಾಗೂ ತ್ಯಾಗದ ಸಂದೇಶ ಸಾರುವ ಭಗವಾನ್ ಬಾಹುಬಲಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಇದು ಸಾರ್ವಜನಿಕರ ಪ್ರಮುಖ ಆಕರ್ಷಣೆಯಾಗಿದೆ.
35 ಸಾವಿರ ಪುಷ್ಪ ಕುಂಡಗಳ ವೈಭವ:
ಉದ್ಯಾನವನದಲ್ಲಿ ಸಾಲು ಸಾಲು ಪುಷ್ಪ ಹಾಸಿಗೆಗಳು, ಕಲ್ಲಿನ ದಾರಿಗಳು, ಪುಷ್ಪ ತ್ರಿಕೋನಗಳು, ಬೋನ್ಸಾಯ್ ಉದ್ಯಾನ, ಪಕ್ಷಿ ವೀಕ್ಷಣಾ ಗೋಪುರ, ಕಮಲದ ಕೊಳ, ಬಿದಿರು ವನ ಹಾಗೂ ಸಂಗೀತ ಕಾರಂಜಿ ಸೇರಿದಂತೆ ವಿವಿಧ ಆಕರ್ಷಣೆಗಳನ್ನು ರೂಪಿಸಲಾಗಿದೆ. ಪುಷ್ಪ ಮೇಳದ ಅಂಗವಾಗಿ ಬೆಳೆಸಲಾದ ಸುಮಾರು 35 ಸಾವಿರ ಸಂಖ್ಯೆಯ 49 ಬಗೆಯ ವಾರ್ಷಿಕ ಅಲಂಕಾರಿಕ ಪುಷ್ಪ ಕುಂಡಗಳನ್ನು ಇಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ದೊಡ್ಡ ಕೆರೆ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುತ್ತುವರಿದಿರುವ ಈ ಸಸ್ಯತೋಟವು ಸಸ್ಯ ಹಾಗೂ ಪ್ರಾಣಿ ವೈವಿಧ್ಯವನ್ನು ಆಸ್ವಾದಿಸಲು ಉತ್ತಮ ತಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎನ್. ರಂಗಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

