Wed. Oct 7th, 2026

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ ದಸರಾದ ಮಹತ್ವ

Share this with Friends

ಬೆಂಗಳೂರು:ಭಾರತೀಯ ಹಬ್ಬಗಳ ಪೈಕಿ ಅತ್ಯಂತ ಐತಿಹಾಸಿಕ, ವೈಚಾರಿಕ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿರುವ ಹಬ್ಬಗಳಲ್ಲಿ ದಸರಾ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಯುವ ಪೀಳಿಗೆಗೆ ಇದರ ಪರಿಚಯವನ್ನು ಮಾಡಿಕೊಡುವುದು ಅತ್ಯಂತ ಅಗತ್ಯವಾಗಿದೆ. ಭಾರತೀಯರಾದ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಜಗತ್ತಿಗೆ ಸಾರುವ ಒಂದು ಅಪೂರ್ವ ಸಾಂಸ್ಕೃತಿಕ ಉತ್ಸವವಿದು.

“ದಸರಾ” ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿ ಮತ್ತು ವಿಜಯದಶಮಿಯನ್ನು ಒಳಗೊಂಡ ಹತ್ತು ದಿನಗಳ ಈ ಉತ್ಸವವು ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ “ಮೈಸೂರು ದಸರಾ” ಆಚರಣೆಯ ವೈಶಿಷ್ಟ್ಯತೆಯನ್ನು ಗಮನಿಸಿ, 2008ರಲ್ಲಿ ಯುನೆಸ್ಕೋ (UNESCO) ದಸರಾ ಆಚರಣೆಯ ಕಲೆ ಮತ್ತು ಸಂಸ್ಕೃತಿಯನ್ನು ‘ಮಾನವೀಯತೆಯ ಅದೃಶ್ಯ ಸಾಂಸ್ಕೃತಿಕ ಪರಂಪರೆ’ ಎಂದು ಘೋಷಿಸಿದೆ.

ಪ್ರಾಚೀನ ಕಾಲದ ದಸರಾ ವೈಭವ

ಶರತ್ಕಾಲದಲ್ಲಿ ಆಚರಿಸಲಾಗುವ ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳ ಆರಾಧನೆಗೆ ಸಮರ್ಪಿತವಾಗಿದ್ದು, ಹತ್ತನೆಯ ದಿನವಾದ ವಿಜಯದಶಮಿಯನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಅಧರ್ಮದ ವಿರುದ್ಧ ಧರ್ಮದ ವಿಜಯ ಮತ್ತು ಅಜ್ಞಾನದ ವಿರುದ್ಧ ಜ್ಞಾನದ ವಿಜಯ ಇದರ ಪ್ರಮುಖ ಉದ್ದೇಶವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿದ್ದರೂ, ಮೈಸೂರು ದಸರಾ ತನ್ನದೇ ಆದ ವೈಶಿಷ್ಟ್ಯತೆ, ರಾಜವೈಭವ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ವಿಶ್ವಪ್ರಸಿದ್ಧಿಯಾಗಿದೆ.

ನವರಾತ್ರಿ ಮತ್ತು ದೇವಿಯ ಆರಾಧನೆ

ಪುರಾಣಗಳ ಪ್ರಕಾರ ಮಹಿಷಾಸುರನಂತಹ ಕ್ರೂರ ಅಸುರ ಶಕ್ತಿಗಳ ವಿರುದ್ಧ ಚಾಮುಂಡೇಶ್ವರಿ ದೇವಿಯ ವಿಜಯದ ನೆನಪಿಗಾಗಿ ನವರಾತ್ರಿ ಆಚರಣೆಯು ನಡೆದುಕೊಂಡು ಬಂದಿದೆ. ಅಸುರರ ಸಂಹಾರದ ಮೂಲಕ ಧರ್ಮ ಮತ್ತು ಸತ್ಯದ ವಿಜಯವನ್ನು ಇದು ಸಾರುತ್ತದೆ. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಆರಾಧನೆಗೆ ವಿಶೇಷ ಸ್ಥಾನವಿದೆ.

ಭಾರತೀಯ ಪರಂಪರೆಯಲ್ಲಿ ಪ್ರಕೃತಿಯನ್ನು ಮಾತೃಸ್ವರೂಪವಾಗಿ ಕಾಣುವ ನಂಬಿಕೆಯಿದ್ದು, ಶಕ್ತಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಎಂಬ ನವರೂಪಗಳಲ್ಲಿ ಆರಾಧಿಸಲಾಗುತ್ತದೆ.

ಘಟಸ್ಥಾಪನೆ, ದೇವಿ ಪೂಜೆ, ಸರಸ್ವತಿ ಪೂಜೆ, ದುರ್ಗಾಷ್ಟಮಿ, ಆಯುಧ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ಈ ಅವಧಿಯಲ್ಲಿ ನಡೆಯುತ್ತವೆ. ಹತ್ತನೆಯ ದಿನವಾದ ವಿಜಯದಶಮಿಯಂದು ವಿಜಯಲಕ್ಷ್ಮಿ ಅಥವಾ ಅಪರಾಜಿತಾ ದೇವಿಯ ಆರಾಧನೆಯನ್ನು ನಡೆಸಲಾಗುತ್ತದೆ.

ನವರಾತ್ರಿಯ ಒಂಬತ್ತು ದಿನಗಳು ದೇವಿಯ ಒಂಬತ್ತು ವಿವಿಧ ಬಣ್ಣಗಳನ್ನು ಸಂಕೇತಿಸುತ್ತವೆ. ದಿನ-1 ಕಿತ್ತಳೆ, ದಿನ-2 ಬಿಳಿ, ದಿನ-3 ಕೆಂಪು, ದಿನ-4 ಕಡುನೀಲಿ, ದಿನ-5 ಹಳದಿ, ದಿನ-6 ಹಸಿರು, ದಿನ-7 ಬೂದು, ದಿನ-8 ನೇರಳೆ, ದಿನ-9 ನವಿಲು ಹಸಿರು ಬಣ್ಣಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಅಲ್ಲದೇ, ಹೆಣ್ಣುಮಕ್ಕಳೂ ಸಹ ನವರಾತ್ರಿಯ ಪ್ರತಿದಿನವೂ ಅದೇ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

ವಿಜಯದಶಮಿಗೆ ರಾಮಾಯಣದ ಹಿನ್ನೆಲೆಯೂ ಇದೆ. ಶ್ರೀರಾಮನು ರಾವಣನನ್ನು ಸಂಹರಿಸಿದ ದಿನವೆಂದು ಇದನ್ನು ಆಚರಿಸುವ ಸಂಪ್ರದಾಯವಿದೆ. ಹೀಗಾಗಿ ದಸರಾ ದೇವಿಯ ವಿಜಯ ಮತ್ತು ಶ್ರೀರಾಮನ ವಿಜಯ ಎರಡನ್ನೂ ಪ್ರತಿನಿಧಿಸುವ ಮಹತ್ವದ ಹಬ್ಬವಾಗಿದೆ.

ಐತಿಹಾಸಿಕ ಹಿನ್ನೆಲೆ

ಮೈಸೂರು ದಸರೆಯ ಇತಿಹಾಸ ಅತ್ಯಂತ ಪ್ರಾಚೀನವಾಗಿದೆ. ಭಾರತದ ವಿವಿಧ ರಾಜವಂಶಗಳ ಕಾಲದಲ್ಲಿಯೇ ದುರ್ಗಾ ಮತ್ತು ಮಹಿಷಮರ್ದಿನಿಯ ಆರಾಧನೆಯ ಶಿಲ್ಪಗಳು ಕಂಡುಬರುವುದರಿಂದ ದಸರಾ ಆಚರಣೆಯು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿ ಪರಿಗಣಿಸಲಾಗಿದೆ. ಶ್ರೀರಂಗಪಟ್ಟಣದ ಪತನದ ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1799ರಲ್ಲಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಮರುಚಾಲನೆ ನೀಡಿದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಸರಾ ಉತ್ಸವವು ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಇಂದಿನ ಮೈಸೂರು ದಸರಾ ವಿಜಯನಗರದ ಈ ಪರಂಪರೆಯ ಮುಂದುವರಿದ ರೂಪವಾಗಿದೆ.

ಮೈಸೂರು ಒಡೆಯರ ಕಾಲದ ದಸರಾ ವೈಭವ

ಮೈಸೂರು ಅರಸರಾದ ಶ್ರೀ ರಾಜ ಒಡೆಯರ್ ಅವರು ಸಾ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಹತ್ತು ದಿನಗಳ ದಸರಾ ಉತ್ಸವವನ್ನು ಆರಂಭಿಸಿದರು. ನಂತರ ಮೈಸೂರು ಒಡೆಯರ ಆಡಳಿತದಲ್ಲಿ ದಸರಾ ಉತ್ಸವವು ರಾಜವೈಭವದ ಪ್ರಮುಖ ಸಂಕೇತವಾಗಿ ಬೆಳೆಯಿತು. 1648ರಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಕಾಲದ ದಸರಾ ಆಚರಣೆಗಳ ವಿವರಗಳನ್ನು ಕವಿ ಗೋವಿಂದವೈದ್ಯರು ತಮ್ಮ ‘ಕಂಠೀರವ ನರಸರಾಜ ವಿಜಯ’ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ದೇವಿ ಆರಾಧನೆ, ಆಯುಧ ಪೂಜೆ, ರಾಜದರ್ಬಾರ್, ಮಲ್ಲಯುದ್ಧ, ನೃತ್ಯ, ಸಂಗೀತ ಹಾಗೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರೆಯ ಪ್ರಮುಖ ಭಾಗವಾಗಿದ್ದವು.

ಮೈಸೂರು ಒಡೆಯರ ಕಾಲದಲ್ಲಿ ದಸರಾ ರಾಜಮನೆತನದ ಪ್ರಮುಖ ಉತ್ಸವವಾಗಿತ್ತು. ನವರಾತ್ರಿಯ ಸಂದರ್ಭದಲ್ಲಿ ರಾಜರು ಕುಲದೇವತೆ ಹಾಗೂ ಇತರ ದೇವತೆಗಳನ್ನು ಪೂಜಿಸಿ, ಪಟ್ಟದ ಆನೆ ಮತ್ತು ಕುದುರೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ರಾಜದರ್ಬಾರ್, ಆಯುಧ ಪೂಜೆ ಮತ್ತು ವಿಜಯದಶಮಿ ಮೆರವಣಿಗೆಗಳು ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಆಯುಧ ಪೂಜೆಯ ದಿನದಂದು (ವಿವಿಧ ಆಯುಧಗಳು) ಅತ್ಯಂತ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಮಹಾರಾಜರು ಪಟ್ಟದ ಕತ್ತಿ, ಖಡ್ಗ ಹಾಗೂ ರಾಜವಂಶದ ವಿವಿಧ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಹಿಂದಿನ ಕಾಲದಲ್ಲಿ ರಾಜದರ್ಬಾರ್, ಮಲ್ಲಯುದ್ಧ, ಸಂಗೀತ, ನೃತ್ಯ, ಸಾಹಿತ್ಯ ಗೋಷ್ಠಿ ಮತ್ತು ವಿವಿಧ ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ದಸರಾದ ಭಾಗವಾಗಿದ್ದವು. ಕಾಲ ಬದಲಾದಂತೆ ಅವುಗಳಲ್ಲಿ ಕೆಲವು ಮಾರ್ಪಾಡುಗಳಾಗಿದ್ದರೂ, ದಸರಾದ ಮೂಲ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಸರಾ ಆಚರಣೆ ವಿಶೇಷ ವೈಭವವನ್ನು ಪಡೆಯಿತು. ಮಹಾರಾಜರ ಕತ್ತಿ, ಖಡ್ಗ ಮತ್ತು ರಾಜವಂಶದ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ವಿಜಯದಶಮಿಯಂದು ರಾಜರು ರಾಜಬೀದಿಯಲ್ಲಿ ಖಡ್ಗ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆ ಕಾಲದಲ್ಲಿ ಇಂದಿನ ಚಿನ್ನದ ಅಂಬಾರಿಯಲ್ಲಿ ರಾಜರು ಸವಾರಿ ಮಾಡುತ್ತಿರಲಿಲ್ಲ, ಬದಲಾಗಿ ಎಂಟು ಕುದುರೆಗಳು ಎಳೆಯುವ ಭವ್ಯವಾದ ರಥದಲ್ಲಿ ಮಹಾರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ನಂತರ ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ, ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಸಾಂಪ್ರದಾಯಿಕ ವಿಧಿವಿಧಾನಗಳು ಇದ್ದವು.

ಸಾಂಸ್ಕೃತಿಕ ದಸರಾದ ವಿಶೇಷತೆ

ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಮುಖ ಆಕರ್ಷಣೆಯೆಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು. ನವರಾತ್ರಿಯ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ವಿಶೇಷ ಆಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ದೇವಿಯನ್ನು ವಿವಿಧ ಶಕ್ತಿ ರೂಪಗಳಲ್ಲಿ ಅಲಂಕರಿಸುವ ಸಂಪ್ರದಾಯವಿದೆ. ನವರಾತ್ರಿಯ ಒಂಬತ್ತು ದಿನಗಳ ಅವಧಿಯಲ್ಲಿ ದೇವಿಯ ವಿವಿಧ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತವೆ. ವಿಜಯದಶಮಿಯಂದು ದೇವಿಯನ್ನು ಅಪರಾಜಿತಾ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಮತ್ತೊಂದು ವಿಶೇಷ ಆಕರ್ಷಣೆ ಕುಮಾರಿ ಪೂಜೆ. 2-10 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ದೇವಿಯ ವಿವಿಧ ರೂಪಗಳ ಪ್ರತೀಕವಾಗಿ ಪೂಜಿಸುವ ಸಂಪ್ರದಾಯ ಕೆಲವು ಕಡೆಗಳಲ್ಲಿ ಕಂಡುಬರುತ್ತದೆ.

ಅರಮನೆಯ ಪ್ರಮುಖ ಆಕರ್ಷಣೆ – ರತ್ನಖಚಿತ ಸಿಂಹಾಸನ

ಮೈಸೂರು ಅರಮನೆಯಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ರತ್ನಖಚಿತ ಚಿನ್ನದ ಸಿಂಹಾಸನ. ಇದಕ್ಕೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದಸರಾ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವ ಈ ಚಿನ್ನದ ಸಿಂಹಾಸನವನ್ನು ದಸರೆಗೆ ಮುನ್ನ ಒಂದು ಶುಭ ಮುಹೂರ್ತದಲ್ಲಿ ಜೋಡಿಸಿ ದರ್ಬಾರ್ ಹಾಲ್‌ನಲ್ಲಿ ಇಡಲಾಗುತ್ತದೆ. ವರ್ಷದಲ್ಲಿ ಕೇವಲ 30 ರಿಂದ 40 ದಿನಗಳ ಕಾಲ ಮಾತ್ರ ಇದನ್ನು ವೀಕ್ಷಿಸಬಹುದಾಗಿದೆ. ಈ ಚಿನ್ನದ ಸಿಂಹಾಸನದಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು, ಇದರ ಛತ್ರಿಯ ಮೇಲೆ ಚಿನ್ನದ ಕಳಶವಿದ್ದು ಅದರ ಎರಡೂ ಬದಿಯಲ್ಲಿ ದರ್ಪಣ (ಕನ್ನಡಿ) ಇವೆ. ಮಹಾರಾಜರು ಸಿಂಹಾಸನ ಏರುವ ಸಮಯದಲ್ಲಿ ವಂದಿಸುವ ಶೈಲಿಯಲ್ಲಿ ಸಿಂಹಗಳ ಕೆತ್ತನೆ ಇದೆ. ಇನ್ನು ಈ ಸಿಂಹಾಸನದ ಮೇಲ್ಭಾಗದಲ್ಲಿ ಚಿನ್ನದ ಹಂಸವಿದ್ದು ಅದಕ್ಕೆ ಮುತ್ತಿನ ಪೋಣಿಕೆಯನ್ನು ನೀಡಲಾಗಿದೆ. ಮುತ್ತು ಮತ್ತು ರತ್ನಗಳಿಂದ ಇದನ್ನು ಅಲಂಕರಿಸಲಾಗಿದೆ. ಇನ್ನು ಸಿಂಹಾಸನದ ಹಿಂಭಾಗದಲ್ಲಿ ಲಕ್ಷ್ಮಿ, ಚಾಮುಂಡೇಶ್ವರಿ ಮತ್ತು ಸರಸ್ವತಿಯ ಮೂರ್ತಿಗಳಿವೆ. ತಳಭಾಗದಲ್ಲಿ ವಿಜಯದಶಮಿಯ ದಿನ ಸಿಂಹಾಸನಕ್ಕೆ ರಾಜವಂಶಸ್ಥರಿಂದ ಸಿಂಹಾವಲೋಕನ ಮತ್ತು ಪೂಜೆ ನಡೆಯುತ್ತದೆ.

ಭವ್ಯ ವಿದ್ಯುತ್ ದೀಪಾಲಂಕಾರ

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ವತಿಯಿಂದ ಮೈಸೂರು ನಗರದಾದ್ಯಂತ ಸುಮಾರು 130 ರಿಂದ 136 ಕಿಲೋಮೀಟರ್ ಉದ್ದದ ರಸ್ತೆಗಳಲ್ಲಿ ವಿವಿಧ ಮಾದರಿಯ ಮತ್ತು ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುತ್ತದೆ. ಇಡೀ ಮೈಸೂರು ನಗರವನ್ನು ಕಣ್ಣು ಕೋರೈಸುವಂತೆ ಮಾಡುವ ಈ ದೀಪಾಲಂಕಾರವು ನಗರದ ಸುಮಾರು 118 ಪ್ರಮುಖ ವೃತ್ತಗಳು ಮತ್ತು ಜಂಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಕರ್ನಾಟಕದ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ 75ಕ್ಕೂ ಹೆಚ್ಚು ಕಲಾಕೃತಿಗಳನ್ನು ಎಲ್.ಇ.ಡಿ (LED) ದೀಪಗಳ ಮೂಲಕ ಪ್ರದರ್ಶಿಸಲಾಗುತ್ತದೆ. ದೇಶ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುವ ಈ ಅದ್ಭುತ ಬೆಳಕಿನ ಹಬ್ಬವನ್ನು ಒಟ್ಟು 21 ದಿನಗಳ ಕಾಲ ವಿಸ್ತರಿಸಲಾಗುತ್ತದೆ.

ಅರಮನೆ ದಸರಾ ಮತ್ತು ನಾಡಹಬ್ಬ ದಸರಾ

1969ರ ನಂತರ ಮೈಸೂರು ರಾಜಮನೆತನದ ಆಡಳಿತ ಕೊನೆಗೊಂಡ ಹಿನ್ನೆಲೆಯಲ್ಲಿ ದಸರಾ ಆಚರಣೆಯಲ್ಲಿ ಮಹತ್ತರ ಬದಲಾವಣೆ ಉಂಟಾಯಿತು. ಪ್ರಸ್ತುತ ಮೈಸೂರಿನಲ್ಲಿ ದಸರಾ ಎರಡು ಪ್ರಮುಖ ರೂಪಗಳಲ್ಲಿ ನಡೆಯುತ್ತದೆ.

ಒಂದೆಡೆ ಅರಮನೆಯೊಳಗೆ ರಾಜಮನೆತನದ ಪರಂಪರೆಯನ್ನು ಮುಂದುವರಿಸಿಕೊಂಡು ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿ, ಶಮಿಪೂಜೆ ಮತ್ತು ಇತರ ಸಾಂಪ್ರದಾಯಿಕ ಆಚರಣೆಗಳು ಇದರ ಭಾಗವಾಗಿವೆ. ಮತ್ತೊಂದೆಡೆ ಕರ್ನಾಟಕ ಸರ್ಕಾರವು ಸಾರ್ವಜನಿಕರಿಗಾಗಿ ‘ನಾಡಹಬ್ಬ ದಸರಾ’ವನ್ನು ಆಯೋಜಿಸುತ್ತದೆ. ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ.

ಹೀಗಾಗಿ ಇಂದಿನ ಮೈಸೂರು ದಸರಾ ರಾಜಮನೆತನದ ಪರಂಪರೆ ಮತ್ತು ಆಧುನಿಕ ಸಾರ್ವಜನಿಕ ಉತ್ಸವದ ಸಮನ್ವಯವಾಗಿ ರೂಪುಗೊಂಡಿದೆ.

ಚಾಮುಂಡೇಶ್ವರಿ ಉತ್ಸವ ಮತ್ತು ಜಂಬೂ ಸವಾರಿ

ಮೈಸೂರು ದಸರಾ ಮತ್ತು ಆನೆಗಳ ನಡುವಿನ ಸಂಬಂಧವು ಬಹಳ ಹಳೆಯದು. ಒಡೆಯರ ಕಾಲದ ರಾಜವೈಭವದ ಮೆರವಣಿಗೆಗಳಿಂದ ಆರಂಭವಾದ ಈ ಪರಂಪರೆ, ಇಂದು ಸರ್ಕಾರದ ನೇತೃತ್ವದಲ್ಲಿ ನಡೆಯುವ ಜಂಬೂ ಸವಾರಿಯ ರೂಪದಲ್ಲಿ ಮುಂದುವರಿದಿದೆ.

ಜಂಬೂ ಸವಾರಿ ಆರಂಭಕ್ಕೆ ಮುನ್ನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 21 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತ್ತದೆ.

ಜಂಬೂಸವಾರಿಯು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಯನ್ನು ಹೊತ್ತು 14 ಅಲಂಕೃತ ಗಜಗಳೊಂದಿಗೆ, ಜನಸಾಗರದೊಡನೆ ಧೀರ-ಗಂಭೀರ ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಗಜರಾಜನ ಠೀವಿಗೆ ಸರಿಸಾಟಿಯಿಲ್ಲ. ಭಾರತದ ಬೇರೆಲ್ಲೂ ದಸರಾ ಸಮಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಆನೆಗಳು ಪಾಲ್ಗೊಳ್ಳುವುದಿಲ್ಲ.

ಅಂಬಾರಿಯ ತೂಕ ಒಟ್ಟು 750 ಕೆ.ಜಿ. ಆಗಿದ್ದು, ಅದರಲ್ಲಿ 80 ಕೆ.ಜಿ. ಚಿನ್ನವನ್ನು ಬಳಸಲಾಗಿದೆ. ಅಂಬಾರಿಯನ್ನು ಹೊತ್ತ ಬಲರಾಮ ಆನೆಯು ಜಂಟಿಯಾಗಿ ಆಕರ್ಷಕ ನಡಿಗೆಯನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಪೋಲಿಸ್ ಬ್ಯಾಂಡ್, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಾರುವ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಇದನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಮೈಸೂರಿನಲ್ಲಿ ಸೇರುತ್ತಾರೆ.

ದಸರೆಯ ವಿಶೇಷ ಕಾರ್ಯಕ್ರಮಗಳು

ಯುವ ಸಂಭ್ರಮ, ಯುವ ದಸರಾ: ದಸರಾಗೆ ಯುವಜನರನ್ನು ಸೆಳೆಯಲು ಯುವ ಸಂಭ್ರಮ ಮತ್ತು ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಸಮಾರಂಭ ನಡೆಯುತ್ತದೆ. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಜನಪದ ಸೇರಿದಂತೆ ವಿವಿಧ ಪ್ರಾಕಾರಗಳ ನೃತ್ಯ ಕಲಾವಿದರ ಪ್ರದರ್ಶನ ಗಮನ ಸೆಳೆಯುತ್ತದೆ. ವಿವಿಧ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇನ್ನು ಯುವ ದಸರಾದಲ್ಲಿ ಸಿನಿಮಾ ತಾರೆಯರು ಹಾಗೂ ಖ್ಯಾತ ಗಾಯಕರ ಸಮಾಗಮವಾಗುತ್ತದೆ. ಮಹಾರಾಜ ಮೈದಾನದಲ್ಲಿ ಸಮಾರಂಭ ನಡೆಯುತ್ತದೆ. ತಮ್ಮ ನೆಚ್ಚಿನ ನಟ-ನಟಿಯರು, ಗಾಯಕರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಯುವ ದಸರಾದಲ್ಲಿ ಜನ ಸೇರುತ್ತಾರೆ.

ಕಂಬಳ: ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೃಷಿ ಸಂಸ್ಕೃತಿ ಹಾಗೂ ಜನಪದದ ಪ್ರತೀಕವಾದ ‘ಕಂಬಳ’ ಆಯೋಜನೆ ಮಾಡಲಾಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಮೈಸೂರಿನ ಸಾತಗಳ್ಳಿಯಲ್ಲಿ ಆಯೋಜಿಸಲು ಅಧಿಕೃತವಾಗಿ ಸಿದ್ಧತೆಗಳು ನಡೆದಿವೆ. ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪದದೊಂದಿಗೆ ಹಾಸುಹೊಕ್ಕಾಗಿದೆ. ಸಾಂಸ್ಕೃತಿಕ ಹಿನ್ನೆಲೆಯ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸಲಾಗುತ್ತಿದೆ.

ಮೇಳಗಳು: ಕೃಷಿ, ಆಹಾರ ಮೇಳಗಳನ್ನು ದಸರಾದಲ್ಲಿ ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಸ್ಥಳೀಯ ಹಾಗೂ ವಿಶೇಷ ತಿನಿಸುಗಳು ಮಳಿಗೆಗಳಲ್ಲಿ ಸಿಗುತ್ತವೆ. ಆಹಾರ ಪ್ರಿಯರಿಗೆ ಈ ಮೇಳ ಖುಷಿಕೊಡುತ್ತದೆ. ಇಲ್ಲಿ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ತಿನ್ನುವ ಮತ್ತು ಅಡುಗೆ ಸ್ಪರ್ಧೆಗಳು ನಡೆಯುತ್ತವೆ. ವಿಜಯಿಗಳಿಗೆ ವಿಶೇಷ ಬಹುಮಾನಗಳು ಸಹ ಇರುತ್ತವೆ. ಕೃಷಿ ಮೇಳವು ರೈತರಿಗೆ ಸಹಕಾರಿಯಾಗಲಿದೆ. ನಾನಾ ತಳಿಯ ಬೆಳೆಗಳು ಮತ್ತು ಹಣ್ಣುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರುತ್ತದೆ. ರೈತರಿಗೆ ಕೃಷಿ ಸಂಬಂಧಿತ ಸಲಹೆಗಳಿಗಾಗಿ ವಿಚಾರಣಾ ಸಂಕಿರಣಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ.

ಫಲಪುಷ್ಪ, ವಸ್ತುಪ್ರದರ್ಶನ: ದಸರಾದಲ್ಲಿ ಫಲಪುಷ್ಪ ಮತ್ತು ವಸ್ತುಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ನಾನಾ ಮಾದರಿಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಆಕರ್ಷಕ ಪುಷ್ಪ ಮಾದರಿಗಳು ಜನರನ್ನು ಸೆಳೆಯುವಂತಿರುತ್ತವೆ. ಅನೇಕರಿಗೆ ಇದು ಸೆಲ್ಫಿ ಸ್ಪಾಟ್ ಆಗುತ್ತದೆ. ಸರ್ಕಾರಗಳ ಪ್ರಮುಖ ಯೋಜನೆಗಳನ್ನು, ಕಾರ್ಯಸಾಧನೆಗಳನ್ನು ವಸ್ತುಪ್ರದರ್ಶನದ ಮೂಲಕ ತಿಳಿಸಲಾಗುತ್ತದೆ. ನಾಡು-ದೇಶದ ಇತಿಹಾಸ, ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸುವ ಮಾದರಿಗಳು ಇರುತ್ತವೆ.

ಗೊಂಬೆ ಪ್ರದರ್ಶನ: ಸ್ಥಳೀಯವಾಗಿ ‘ಗೊಂಬೆ ಹಬ್ಬ’ ಅಥವಾ ‘ಬೊಂಬೆ ಮನೆ’ ಎಂದು ಕರೆಯಲ್ಪಡುವ ಮೈಸೂರು ದಸರಾ ಗೊಂಬೆ ಪ್ರದರ್ಶನವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಇದರಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಜೋಡಿಸಲಾದ ಗೊಂಬೆಗಳು ಮತ್ತು ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವು ರಾಮಾಯಣದಂತಹ ಪೌರಾಣಿಕ ಮಹಾಕಾವ್ಯಗಳು, ದಸರಾ ಮೆರವಣಿಗೆಯ ದೃಶ್ಯಗಳು (ಜಂಬೂ ಸವಾರಿ), ನವದುರ್ಗೆಯರು ಮತ್ತು ಅಷ್ಟಲಕ್ಷ್ಮಿಯರ ಜೊತೆಗೆ ಸಮಕಾಲೀನ ಅಥವಾ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಾಗಿ ಬಿಂಬಿಸುತ್ತವೆ.

ಮಕ್ಕಳ ದಸರಾ: ದಸರಾದಲ್ಲಿ ವಿಶೇಷ ಆಕರ್ಷಣೆ ಮಕ್ಕಳ ದಸರಾ ಆಗಿದೆ. ಮಕ್ಕಳ ದಸರಾದಲ್ಲಿ ವಿಶೇಷವಾಗಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ಸಾಧನೆ ತೋರಿದ ಮಕ್ಕಳಿಂದ ಮಕ್ಕಳ ದಸರಾವನ್ನು ಉದ್ಘಾಟಿಸಲಾಗುತ್ತದೆ.

ಗೋಷ್ಟಿಗಳು ಹಾಗೂ ಕವಿಗೋಷ್ಠಿ

ಸಾಹಿತ್ಯ ಇತಿಹಾಸ, ಸಾಹಿತ್ಯ ಮತ್ತು ಕವಿಗಳ ಮುಖಾಂತರ ಮೈಸೂರು ಸಾಹಿತ್ಯ-ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ದಸರಾದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣಗಳು, ಸಾಹಿತ್ಯ ಪ್ರೇಮಿಗಳನ್ನು ಆಕರ್ಷಿಸುತ್ತವೆ. ಪುಸ್ತಕ ಪ್ರೇಮಿಗಳಿಗಾಗಿ ಪುಸ್ತಕ ಮೇಳವನ್ನು ಸಹ ನಡೆಸಲಾಗುತ್ತದೆ. ಸಂಗೀತ ಪ್ರೇಮಿಗಳಿಗಾಗಿ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಪ್ರಸಿದ್ಧ ವಿದ್ವಾಂಸರು, ಗಾಯಕರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಚಲನಚಿತ್ರೋತ್ಸವ ಮತ್ತು ನಾಟಕ ಪ್ರದರ್ಶನಗಳು ಸಹ ನಡೆಯುತ್ತವೆ.

ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್)

ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯ ನಂತರ ರಾತ್ರಿ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಅತ್ಯಂತ ಆಕರ್ಷಕ ಮತ್ತು ರೋಮಾಂಚಕ ಅಂತಿಮ ಕಾರ್ಯಕ್ರಮ ಪಂಜಿನ ಕವಾಯತು. ಇದು ಪೋಲಿಸ್ ಪಡೆಗಳ ಕವಾಯತು, ಸಾಹಸ ಪ್ರದರ್ಶನ ಮತ್ತು ಬಣ್ಣಬಣ್ಣದ ಪಟಾಕಿಗಳ ಬೆಳಕಿನ ಸಂಭ್ರಮದಿಂದ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ. ಅತ್ಯಾಕರ್ಷಕ ಅಶ್ವಾರೋಹಿ ದಳದ ಸಾಹಸಗಳು, ಮೋಟಾರ್ ಸೈಕಲ್ ಸವಾರರ ಸಾಹಸ ಪ್ರದರ್ಶನಗಳು, ಪೋಲಿಸ್ ಬ್ಯಾಂಡ್ ವಾದನ ಮತ್ತು ಪಂಜುಗಳಿಂದ ಮೂಡಿಬರುವ ವಿವಿಧ ಕಲಾಕೃತಿಗಳೊಂದಿಗೆ ಪಂಜಿನ ಕವಾಯತು ನಡೆಯುತ್ತದೆ. ರಾತ್ರಿಯ ಆಕಾಶದಲ್ಲಿ ಮೂಡುವ ವರ್ಣರಂಜಿತ ಪಟಾಕಿಗಳ ಪ್ರದರ್ಶನ ಮತ್ತು ಲೇಸರ್ ಶೋ ಎಲ್ಲರ ಗಮನ ಸೆಳೆಯುತ್ತದೆ. ದಸರಾ ಹಬ್ಬಕ್ಕೆ ಅಂತಿಮ ತೆರೆ ಎಳೆಯುವ ಕಾರ್ಯಕ್ರಮ ಇದಾಗಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆ ದಸರಾ ಉತ್ಸವದ ಸಾರ್ಥಕತೆಯನ್ನು ಮೂಡಿಸುತ್ತದೆ.

ಅರಮನೆಯೊಳಗಿನ ಸಾಂಪ್ರದಾಯಿಕ ಆಚರಣೆಗಳು ಮೈಸೂರು ಒಡೆಯರ ಇತಿಹಾಸವನ್ನು ನೆನಪಿಸಿದರೆ, ಸಾರ್ವಜನಿಕ ದಸರಾ ಕಾರ್ಯಕ್ರಮಗಳು ಆ ಪರಂಪರೆಯನ್ನು ಜನಸಾಮಾನ್ಯರೊಂದಿಗೆ ಸಂಭ್ರಮಿಸುವಂತೆ ಮಾಡುತ್ತವೆ.

ಸಮಾರೋಪ

ಮೈಸೂರು ದಸರಾ ಹಲವು ಶತಮಾನಗಳ ಇತಿಹಾಸ, ಧಾರ್ಮಿಕ ನಂಬಿಕೆ, ರಾಜಪರಂಪರೆ, ಕಲೆ, ಸಂಸ್ಕೃತಿ ಮತ್ತು ಜನಪಾಲ್ಗೊಳ್ಳುವಿಕೆಯ ಅಪೂರ್ವ ಸಂಗಮವಾಗಿದೆ. ವಿಜಯನಗರದ ಪರಂಪರೆಯಿಂದ ಮೈಸೂರು ಒಡೆಯರ ರಾಜವೈಭವದವರೆಗೆ ಮತ್ತು ಅಲ್ಲಿಂದ ಇಂದಿನ ನಾಡಹಬ್ಬದ ರೂಪದವರೆಗೆ ದಸರಾ ಹಲವು ಹಂತಗಳನ್ನು ದಾಟಿ ಬೆಳೆದಿದೆ.

ಬನ್ನಿ, ಈ ವರ್ಷದ ನಾಡಹಬ್ಬ ದಸರಾದಲ್ಲಿ ಎಲ್ಲರೂ ಪಾಲ್ಗೊಂಡು, ವೈವಿಧ್ಯಮಯ ಆಚರಣೆಗಳನ್ನು ಕಣ್ಣುಂಬಿಕೊಳ್ಳೋಣ!

ಲೇಖಕರು:ಡಾ. ಶಾಲಿನಿ ರಜನೀಶ್,ಸರ್ಕಾರದ ಮುಖ್ಯ ಕಾರ್ಯದರ್ಶಿ

 


Share this with Friends

Related Post