Wed. Oct 7th, 2026

75 ವರ್ಷಗಳಲ್ಲೇ ಭೀಕರ ಬರ: ರೈತರನ್ನು ರಕ್ಷಿಸುವುದೇ ಸರ್ಕಾರದ ಮೊದಲ ಆದ್ಯತೆ : ಡಾ. ಜಿ. ಪರಮೇಶ್ವರ್ ಭರವಸೆ

Share this with Friends

ಬಳ್ಳಾರಿ: ಲಭ್ಯವಿರುವ ಐತಿಹಾಸಿಕ ಅಂಕಿ-ಅಂಶಗಳ ಪ್ರಕಾರ ಕರ್ನಾಟಕ ರಾಜ್ಯವು ಕಳೆದ 75 ವರ್ಷಗಳಲ್ಲೇ ಅತ್ಯಂತ ಭೀಕರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಶೇಕಡಾ 90 ರಷ್ಟು ಬೆಳೆ ಹಾನಿಯಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರನ್ನು ರಕ್ಷಿಸುವುದು ನಮ್ಮ ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ಅವರ ಸಹಾಯಕ್ಕೆ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ, ಒಣಗುತ್ತಿರುವ ತೊಗರಿ ಬೆಳೆ ಪರಿಸ್ಥಿತಿಯನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಹುತೇಕ ರಾಜ್ಯವೇ ಬರಪೀಡಿತ:

ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ ಕರಾವಳಿ ಭಾಗದ ಕೆಲವೇ ಪ್ರದೇಶಗಳನ್ನು ಹೊರತುಪಡಿಸಿ, ಇಡೀ ರಾಜ್ಯಾದ್ಯಂತ ಬರದ ಛಾಯೆ ಆವರಿಸಿದೆ. ಈಗಾಗಲೇ 217 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನುಳಿದ 23 ತಾಲೂಕುಗಳಲ್ಲಿ ಪ್ರಸ್ತುತ ಜಂಟಿ ಸಮೀಕ್ಷೆ (ಗ್ರೌಂಡ್ ಟ್ರೂಥಿಂಗ್‌) ಪ್ರಗತಿಯಲ್ಲಿದ್ದು, ಅದರಲ್ಲಿಯೂ ಕನಿಷ್ಠ 10 ರಿಂದ 15 ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಲಿವೆ ಎಂದರು.

ರೈತರ ಕೈಕೊಟ್ಟ ಜೋಳ, ತೊಗರಿ ಪರ್ಯಾಯ ಬೆಳೆಗಳು:

ಮಳೆಯ ಅಭಾವದಿಂದಾಗಿ ರೈತರು ಮೊದಲ ಬಾರಿ ಬಿತ್ತನೆ ಮಾಡಿದ್ದ ತೊಗರಿ ಸಂಪೂರ್ಣ ನಾಶವಾಗಿತ್ತು. ಆ ಬಳಿಕ ಸ್ವಲ್ಪ ಮಳೆ ಬಂದಾಗ ಆಸೆಯಿಂದ ಜೋಳ ಸೇರಿದಂತೆ ಪರ್ಯಾಯ ಬೆಳೆಗಳನ್ನು ಬಿತ್ತಿದ್ದರು. ಆದರೆ, ವರುಣನ ಮುನಿಸಿನಿಂದಾಗಿ ಎರಡನೇ ಬಾರಿಯ ಬೆಳೆಯೂ ಕೈಗೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಮಳೆಯಾಶ್ರಿತ ಪ್ರದೇಶಗಳಷ್ಟೇ ಅಲ್ಲದೆ ನೀರಾವರಿ ಅಚ್ಚುಕಟ್ಟು ಪ್ರದೇಶಗಳೂ ಸಂಕಷ್ಟಕ್ಕೆ ಸಿಲುಕಿವೆ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಿಗೆ ಮಹಾರಾಷ್ಟ್ರ ಮತ್ತು ಘಟ್ಟ ಪ್ರದೇಶದ ಮಳೆಯಿಂದಾಗಿ ಅತ್ಯಲ್ಪ ನೀರು ಬಂದಿದ್ದರೂ, ಲಭ್ಯವಿದ್ದ ನೀರನ್ನು ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ವಿಷಾದಿಸಿದರು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕೇಂದ್ರದ ತಂಡವೂ ಇದನ್ನು ಪರಿಶೀಲಿಸಿದೆ.

ಕೇಂದ್ರದ ಹಣಕ್ಕೆ ಕಾಯದೆ ರಾಜ್ಯದಿಂದಲೇ ₹2,500 ಮೊದಲ ಕಂತು ಬಿಡುಗಡೆ:

ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಹೆಕ್ಟೇರ್‌ಗೆ ₹8,500 ಬರ ಪರಿಹಾರ ನೀಡಬೇಕಿದೆ. ಆದರೆ ಕೇಂದ್ರದಿಂದ ಇದುವರೆಗೆ ಒಂದೇ ಒಂದು ಪೈಸೆ ಹಣವೂ ಬಿಡುಗಡೆಯಾಗಿಲ್ಲ. ಆದರೂ ನಾವು ಕೇಂದ್ರವನ್ನು ದೂಷಿಸುತ್ತಾ ಕೈಕಟ್ಟಿ ಕೂರುವುದಿಲ್ಲ. ಕೇಂದ್ರದ ಅನುದಾನ ಬರುವ ಮುನ್ನವೇ ರೈತರ ತುರ್ತು ನೆರವಿಗಾಗಿ ರಾಜ್ಯ ಸರ್ಕಾರ ತನ್ನ ಸ್ವಂತ ನಿಧಿಯಿಂದ ಮೊದಲ ಕಂತಿನ ರೂಪದಲ್ಲಿ ಪ್ರತಿ ರೈತರಿಗೆ ₹2,500 ಬಿಡುಗಡೆ ಮಾಡಲು ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ತಕ್ಷಣವೇ ಈ ಮೊತ್ತವನ್ನು ತಲುಪಿಸಲು ಸೂಚಿಸಲಾಗಿದೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳು ಹಾಗೂ ವಿದ್ಯುತ್ ಸಬ್ಸಿಡಿಗಳ ಮೂಲಕ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ಕನಿಷ್ಠ ₹60,000 ರಿಂದ ₹70,000 ಆರ್ಥಿಕ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲಾಗಿದೆ.

₹11,000 ಕೋಟಿ ರಾಷ್ಟ್ರೀಯ ಪರಿಹಾರಕ್ಕೆ ಮನವಿ:

ಒಟ್ಟು 177 ತಾಲೂಕುಗಳಲ್ಲಿ ಸುಮಾರು ₹46,000 ಕೋಟಿ ಮೊತ್ತದ ಕೃಷಿ ಹಾಗೂ ಮೂಲಸೌಕರ್ಯ ಹಾನಿಯಾಗಿದೆ ಎಂದು ಅಂದಾಜಿಸಿ ಕೇಂದ್ರಕ್ಕೆ ಈಗಾಗಲೇ ಎರಡು ಪ್ರಮುಖ ಮನವಿ ಪತ್ರಗಳನ್ನು (ಮೆಮೊರಾಂಡಮ್) ಸಲ್ಲಿಸಲಾಗಿದೆ. ಆದರೆ ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಪ್ರಕಾರ ಇಷ್ಟೂ ಮೊತ್ತ ಸಿಗುವುದಿಲ್ಲ. ಹೀಗಾಗಿ ನಿಯಮಬದ್ಧವಾಗಿ ನಮಗೆ ಬರಬೇಕಾದ ₹11,000 ದಿಂದ ₹11,500 ಕೋಟಿ ತುರ್ತು ನೆರವನ್ನು ಕೋರಲಾಗಿದೆ. ಈಗಾಗಲೇ ಮೂರು ಕೇಂದ್ರ ತಂಡಗಳು ರಾಜ್ಯದ ವಿವಿಧೆಡೆ ಉಪಗ್ರಹ ಆಧಾರಿತ ದತ್ತಾಂಶ ಹಾಗೂ ಸ್ಥಳ ಪರಿಶೀಲನೆ ನಡೆಸಿ ವರದಿ ಕೊಂಡೊಯ್ದಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಈ ಹಿಂದೆ 2023ರ ಬರಗಾಲದ ಸಂದರ್ಭದಲ್ಲಿ ₹18,000 ಕೋಟಿ ಕೇಳಿದ್ದರೂ ಕೇಂದ್ರ ಸ್ಪಂದಿಸಿರಲಿಲ್ಲ, ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ನ್ಯಾಯಾಲಯದ ಆದೇಶದಂತೆ ₹3,500 ಕೋಟಿ ಬಿಡುಗಡೆಯಾಗಿತ್ತು ಎಂಬುದನ್ನು ನೆನಪಿಸಿದರು.

ಬ್ಯಾಂಕ್ ನೋಟಿಸ್‌ಗೆ ಆತಂಕ ಬೇಡ; ಸಾಲ ವಸೂಲಾತಿ ತಡೆ:

ಬರಗಾಲದ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲಗಳ ವಸೂಲಾತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದೂಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸಾಲಗಳನ್ನು ಮರುಹೊಂದಾಣಿಕೆ (Reschedule) ಮಾಡಲು ಸೂಚಿಸಿರುವುದರಿಂದ, ಬ್ಯಾಂಕುಗಳಿಂದ ಬರುವ ನೋಟಿಸ್‌ಗಳಿಗೆ ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ರಸ್ತೆ ಕಾಮಗಾರಿಗಿಂತ ರೈತರೇ ಮೊದಲ ಆದ್ಯತೆ:

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಪ್ರತಿವರ್ಷ ₹52,000 ಕೋಟಿ ಮೀಸಲಿಡುತ್ತಿದ್ದು, ಯಾವುದೇ ಕಾರಣಕ್ಕೂ ಹಣಕಾಸಿನ ಕೊರತೆಯ ನೆಪದಲ್ಲಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. “ಬರಗಾಲದ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಿಂತ ನಮಗೆ ಮಾನವೀಯತೆ ಮತ್ತು ರೈತರ ಜೀವ ಉಳಿಸುವುದು ಮುಖ್ಯ. ರಸ್ತೆಗಳು ಅಥವಾ ಇತರೆ ಮೂಲಸೌಕರ್ಯ ಕಾಮಗಾರಿಗಳನ್ನು ಮುಂದಿನ ವರ್ಷವಾದರೂ ಮಾಡಬಹುದು, ಆದರೆ ರೈತನ ಬದುಕು ನಾಶವಾದರೆ ಮರಳಿ ತರಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ರೈತರ ಪರವಾಗಿ ಕೆಲಸ ಮಾಡುತ್ತಿದೆ” ಎಂದು ದೃಢವಾಗಿ ತಿಳಿಸಿದರು

 


Share this with Friends

Related Post