ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಮಹತ್ವದ ಹೆಜ್ಜೆ ಇಟ್ಟಿದೆ. ಜಯನಗರ ವಿಭಾಗದ ಪ್ರಮುಖ 42 ರಸ್ತೆಗಳಲ್ಲಿ ನೂತನ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, “ಜಯನಗರದ ಮಾದರಿಯಲ್ಲೇ ನಗರದ ಇತರ ವಿಭಾಗಗಳಲ್ಲೂ ಹಂತ-ಹಂತವಾಗಿ ವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅನಧಿಕೃತ ಪಾರ್ಕಿಂಗ್‌ಗೆ ಬ್ರೇಕ್ ಬೀಳಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ,” ಎಂದರು.
ಜನಗಣತಿ 2026-27: ಸ್ವಯಂ ಗಣತಿ ಅಭಿಯಾನಕ್ಕೆ ಚಾಲನೆ
ಇದೇ ವೇಳೆ ಕನಕಪುರ ರಸ್ತೆಯ ಎಚ್.ಎಂ. ತಾಂಬೂರಿನ್ ಅಪಾರ್ಟ್‌ಮೆಂಟ್‌ನಲ್ಲಿ ಆಯೋಜಿಸಲಾಗಿದ್ದ ‘ಸ್ವಯಂ ಗಣತಿ’ (Self Enumeration) ಅಭಿಯಾನಕ್ಕೆ ಆಯುಕ್ತರು ಚಾಲನೆ ನೀಡಿದರು. ನೂರಾರು ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ವಿವರಗಳನ್ನು ದಾಖಲಿಸಿದರು. “ದೇಶದ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು,” ಎಂದು ಅವರು ಕರೆ ನೀಡಿದರು.
ಸಾರ್ವಜನಿಕರ ದೂರುಗಳಿಗೆ ಸ್ಥಳದಲ್ಲೇ ಸ್ಪಂದನೆ
ಸಭೆಯಲ್ಲಿ ಭಾಗವಹಿಸಿದ್ದ ನಿವಾಸಿಗಳು ರಸ್ತೆ ಗುಂಡಿಗಳು, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಸಾರಕ್ಕಿ ಕೆರೆ ಬಫರ್ ಝೋನ್ ಒತ್ತುವರಿ ಮತ್ತು ಅಣ್ಣಯ್ಯಪ್ಪ ಕೆರೆ ಉದ್ಯಾನವನದ ಶೌಚಾಲಯಗಳ ನಿರ್ವಹಣೆ ಕುರಿತು ಆಯುಕ್ತರ ಗಮನ ಸೆಳೆದರು. ನಾಗರಿಕರ ಅಹವಾಲುಗಳನ್ನು ಆಲಿಸಿದ ಆಯುಕ್ತರು, ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ (RWA) ಜೊತೆಗೂಡಿ ಆಧುನಿಕ ತಂತ್ರಜ್ಞಾನದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ಭರವಸೆ ನೀಡಿದರು.

