Sat. Jun 6th, 2026

ಜಾತಿ-ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರವಿರಲಿ: ಸಿಎಂ ಸಿದ್ದರಾಮಯ್ಯ ಕರೆ

Share this with Friends

ಕಲಬುರಗಿ: “ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಸಮಾಜದಲ್ಲಿ ಎಲ್ಲರೂ ಮಾನವೀಯತೆಯಿಂದ ಬದುಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರ ಹಿತಾಸಕ್ತಿಗಳ ಆಮಿಷಕ್ಕೆ ಯಾರೂ ಬಲಿಯಾಗಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಶ್ರೀ ಭೋಜಲಿಂಗೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಮಾನತೆಯೇ ಧರ್ಮದ ಸಾರ:

ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಭೋಜಲಿಂಗೇಶ್ವರರು ಸಮಾಜಕ್ಕೆ ಸತ್ಯ ಮತ್ತು ಸಮಾನತೆಯ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಬುದ್ಧ, ಬಸವಣ್ಣ, ಕನಕದಾಸರು ಹಾಗೂ ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು. ಸಮಾಜದಲ್ಲಿರುವ ಮೇಲು-ಕೀಳು ಎಂಬ ತಾರತಮ್ಯ ಅಳಿಯಬೇಕಾದರೆ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.

ಮೂಢನಂಬಿಕೆ ಬಿಡಿ, ಶಿಕ್ಷಣ ಪಡೆಯಿರಿ:

“ಜಾತಿ ವ್ಯವಸ್ಥೆ ಇಂದಿಗೂ ಸಂಪೂರ್ಣವಾಗಿ ಅಳಿದಿಲ್ಲ. ಕೇವಲ ಕರ್ಮ ಸಿದ್ಧಾಂತಕ್ಕೆ ಬಲಿಯಾಗದೆ, ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣವನ್ನು ಪಡೆಯುವ ಮೂಲಕ ಮೂಢನಂಬಿಕೆಗಳಿಂದ ಹೊರಬರಬೇಕು. ಪ್ರತಿಯೊಬ್ಬರೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಫಲವನ್ನು ಸಮಾನವಾಗಿ ಹಂಚಿಕೊಳ್ಳುವಂತಾಗಬೇಕು” ಎಂದು ಸಿಎಂ ತಿಳಿಸಿದರು.

ಮಠಕ್ಕೆ ಅಭಿವೃದ್ಧಿ ಹಸ್ತ:

ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೋಜಲಿಂಗೇಶ್ವರ ಮಠಕ್ಕೆ 1 ಕೋಟಿ ರೂ. ಅನುದಾನ ಒದಗಿಸಿರುವುದನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಮಠವು ಜಾತ್ಯತೀತವಾಗಿ ಬೆಳೆಯಲಿ ಎಂದು ಹಾರೈಸಿದರು. ಅಲ್ಲದೆ, ಚಿತ್ತಾಪುರದಲ್ಲಿ ವಸತಿ ನಿಲಯ ಹಾಗೂ ಯಾತ್ರಿ ನಿವಾಸ ನಿರ್ಮಾಣದ ಬೇಡಿಕೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಮುಖ ಗಣ್ಯರು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

 


Share this with Friends

Related Post