Thu. Jul 16th, 2026

ಕಲಬುರಗಿ ಜೈಲಿನಿಂದ ಖೈದಿಗಳ ಪರಾರಿ: ಜೈಲಾಧಿಕಾರಿ, ಸಿಬ್ಬಂದಿ ಅಮಾನತು; ಬಿಜೆಪಿಗೆ ತಿರುಗೇಟು ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ!

Share this with Friends

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ತಪ್ಪಿಸಿಕೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜೈಲಾಧಿಕಾರಿ ಮತ್ತು ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ತಪ್ಪಿಸಿಕೊಂಡಿರುವ ಖೈದಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಈಗಾಗಲೇ ಓರ್ವ ಖೈದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರಾಗೃಹಗಳ ಸುಧಾರಣೆಗೆ ಕ್ರಮ

ನಾನು ಗೃಹ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಇಲಾಖೆಯ ಪ್ರತಿ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ಎಲ್ಲಾ ವಿಭಾಗಗಳ ಬಲವರ್ಧನೆ ಮತ್ತು ಆಧುನೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಕಾರಾಗೃಹಗಳ ಸ್ಥಿತಿಗತಿ ಹಾಗೂ ಅಲ್ಲಿನ ಬಂಧಿಖಾನೆ ಸಿಬ್ಬಂದಿಗಳ ಕಾರ್ಯಕ್ಷಮತೆಯ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಲಿದ್ದೇನೆ. ಜೈಲುಗಳ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಭರವಸೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಜೈಲಿನ ಘಟನೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ವಿರೋಧ ಪಕ್ಷ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ಟೀಕೆ ಮಾಡಲು ಕಾಯುತ್ತಿರುವ ಬಿಜೆಪಿ ನಾಯಕರು ಮೊದಲು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ಜೈಲುಗಳು ಎಂತಹ ಸ್ಥಿತಿಯಲ್ಲಿದ್ದವು ಎಂಬುದನ್ನು ನೆನಪಿಸಿಕೊಳ್ಳಲಿ” ಎಂದು ಲೇವಡಿ ಮಾಡಿದ್ದಾರೆ.

2010ರ ಕೊಪ್ಪಳ ಜೈಲು ದುರಂತ: ಕಳೆದ 2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಬರೋಬ್ಬರಿ 8 ಖೈದಿಗಳು ಒಂದೇ ಬಾರಿ ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಜೈಲು ಬ್ರೇಕ್ ಪ್ರಕರಣವಾಗಿತ್ತು. ಅದು ಅಂದಿನ ಗೃಹ ಸಚಿವರ ವೈಫಲ್ಯ ಎಂದು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ವಿಐಪಿ ಅತಿಥಿ ಗೃಹವಾಗಿದ್ದ ಪರಪ್ಪನ ಅಗ್ರಹಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಖೈದಿಗಳ ಪಾಲಿಗೆ ವಿಐಪಿ ಅತಿಥಿ ಗೃಹವಾಗಿ ಮಾರ್ಪಟ್ಟಿತ್ತು. ಖೈದಿಗಳಿಗೆ ಜೈಲಿನೊಳಗೆ ಸಕಲ ಸವಲತ್ತುಗಳು ದೊರೆಯುತ್ತಿದ್ದ ವರದಿಗಳನ್ನು ಇಡೀ ರಾಜ್ಯವೇ ನೋಡಿದೆ. ಇದನ್ನು ಬಿಜೆಪಿ ನಾಯಕರು ತಮ್ಮ ಸರ್ಕಾರದ ವೈಫಲ್ಯ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ? ಎಂದು ಅವರು ಸವಾಲು ಹಾಕಿದ್ದಾರೆ.

 

 


Share this with Friends

Related Post