Fri. Jul 17th, 2026

ಕಂಠೀರವ ಕ್ರೀಡಾಂಗಣಕ್ಕೆ 5,000 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಸ್ಪರ್ಶ: ಡಿಸಿಎಂ ಡಾ. ಜಿ. ಪರಮೇಶ್ವರ್ ಪ್ರಕಟಣೆ!

Share this with Friends

ಬೆಂಗಳೂರು: ರಾಜ್ಯದ ಕ್ರೀಡಾ ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಬೆಂಗಳೂರಿನ ಐತಿಹಾಸಿಕ ಕಂಠೀರವ ಕ್ರೀಡಾಂಗಣವನ್ನು ಸುಮಾರು 5,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವರೂ ಆದ ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಈ ಬೃಹತ್ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ದರ್ಜೆಯ ಸೌಲಭ್ಯಗಳೊಂದಿಗೆ ಮರುರೂಪಿಸಲಾಗುತ್ತಿದ್ದು, ಈ ಯೋಜನೆಗೆ ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು. ಕ್ರೀಡಾ ತರಬೇತಿ, ಕ್ರೀಡಾಪಟುಗಳ ಕಲ್ಯಾಣ ಮತ್ತು ಪ್ರೋತ್ಸಾಹ ಧನ ವಿತರಣೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇಲಾಖೆಯು ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಅದ್ಧೂರಿಯಾಗಿ “ಅಂತರರಾಷ್ಟ್ರೀಯ ಯುವಜನೋತ್ಸವ”ವನ್ನು ಆಯೋಜಿಸಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದು ಡಾ. ಜಿ. ಪರಮೇಶ್ವರ್ ಪ್ರಕಟಿಸಿದರು. ಮುಂಬರುವ ಡಿಸೆಂಬರ್, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಈ ಜಾಗತಿಕ ಮಟ್ಟದ ಉತ್ಸವ ನಡೆಯಲಿದೆ. ಇದರಲ್ಲಿ ವಿಶ್ವದ ವಿವಿಧ ದೇಶಗಳ ಯುವಜನರು ಭಾಗವಹಿಸಲಿದ್ದು, ನಮ್ಮ ಸಾಂಸ್ಕೃತಿಕ ಪರಂಪರೆ, ಕ್ರೀಡೆ ಮತ್ತು ವೈವಿಧ್ಯಮಯ ವಿಚಾರಧಾರೆಗಳ ವಿನಿಮಯಕ್ಕೆ ಇದು ಅತ್ಯುತ್ತಮ ವೇದಿಕೆಯಾಗಲಿದೆ.

ಒಲಿಂಪಿಕ್ಸ್ ಪದಕದ ಕಡೆಗೆ ನಮ್ಮ ಗುರಿ

ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಜಾಗತಿಕ ಮನ್ನಣೆ ನೀಡುವುದರಿಂದ ಹಿಡಿದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಬೇಟೆಯಾಡುವವರೆಗೆ ಇಲಾಖೆಯು ಹತ್ತಾರು ಕ್ರಾಂತಿಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಕಂದಾಯ, ಮುಜರಾಯಿ ಹಾಗೂ ಕ್ರೀಡಾ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿರುವ ತಾವು, ರಾಜ್ಯದ ಯುವಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಮತ್ತು ಕ್ರೀಡಾ ಕ್ಷೇತ್ರಕ್ಕೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು

ಯುವಶಕ್ತಿಯ ಸಬಲೀಕರಣ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ:

ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 65 ರಷ್ಟು ಜನರು 35 ವರ್ಷದೊಳಗಿನ ಯುವಕರಾಗಿದ್ದಾರೆ. ಇವರೆಲ್ಲರೂ ಪದವಿ ಪಡೆಯುವ ಹೊತ್ತಿಗೆ ಜವಾಬ್ದಾರಿಯುತ ಮತದಾರರಾಗಿರುತ್ತಾರೆ. ಈ ಯುವಶಕ್ತಿ ದಾರಿ ತಪ್ಪದಂತೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡಲು ಕ್ರೀಡಾ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಹಾಜರಾತಿಯಲ್ಲಿ ವಿನಾಯಿತಿ: ಪದವಿ ಮತ್ತು ಡಿಪ್ಲೊಮಾ ಕಲಿಯುತ್ತಿರುವ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಶೇ. 15 ರಷ್ಟು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಶೇ. 25 ರಷ್ಟು ಕಾಲೇಜು ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗುವುದು.

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸರ್ಕಾರವು ನೇಮಕಾತಿ ಮಾಡಿಕೊಳ್ಳಲಿರುವ ಸುಮಾರು 72,000 ಹುದ್ದೆಗಳಲ್ಲಿ ಶೇ. 2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ. ಇಲಾಖಾವಾರು ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಈ ಮೀಸಲಾತಿ ಸಿಗಲಿದ್ದು, ಪೆÇಲೀಸ್ ಇಲಾಖೆಯಲ್ಲಿ ಈಗಾಗಲೇ ಶೇ. 3 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸುನಿಲ್ (ಹಾಕಿ), ನಿಕಿನ್ ಹಾಗೂ ದಿವ್ಯಾ ಅವರಿಗೆ ಈ ಯೋಜನೆಯಡಿ ನೇಮಕಾತಿ ಆದೇಶ ನೀಡಲಾಗಿದೆ.

ಪ್ರೋತ್ಸಾಹ  ಧನ ಹೆಚ್ಚಳ : ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್‍ನಲ್ಲಿ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ (ಚಿನ್ನಕ್ಕೆ 35 ಲಕ್ಷ ರೂ., ಬೆಳ್ಳಿಗೆ 25 ಲಕ್ಷ ರೂ., ಕಂಚಿಗೆ 15 ಲಕ್ಷ ರೂ.) ಜೊತೆಗೆ, ಇನ್ನು ಮುಂದೆ ಕೇವಲ ದೇಶವನ್ನು ಪ್ರತಿನಿಧಿಸುವ ರಾಜ್ಯದ ಪ್ರತಿಯೊಬ್ಬ ಕ್ರೀಡಾಪಟುಗೂ ತಲಾ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೊಸ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದರು.

ತರಬೇತುದಾರರ ನೇಮಕ: ಕ್ರೀಡಾಕೂಟಗಳಿಗೆ ತರಬೇತುದಾರರ ಕೊರತೆಯನ್ನು ನೀಗಿಸಲು ರಾಜ್ಯಾದ್ಯಂತ ಶೀಘ್ರದಲ್ಲೇ 50 ಕ್ರೀಡಾ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.

ಏಕಲವ್ಯ ಹಾಗೂ ಕ್ರೀಡಾ ಪ್ರಶಸ್ತಿ ಪ್ರದಾನ:  ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಏಕಲವ್ಯ ಕ್ರೀಡಾರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಬರುವ ಆಗಸ್ಟ್ 29 ರಂದು (ಹಾಕಿ ಜಾದೂಗಾರ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ) ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.

ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣ: ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿ 17 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಬಜೆಟ್‍ನಲ್ಲಿ ಘೋಷಿಸಿದಂತೆ ವೆಲೋಡ್ರೋಮ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಬಿಜಾಪುರ, ಬಾಗಲಕೋಟೆ ಮತ್ತು ಗದಗ ಭಾಗದ ಕ್ರೀಡಾಪಟುಗಳಿಗೆ ಈಗಾಗಲೇ ಸೈಕಲ್‍ಗಳನ್ನು ವಿತರಿಸಲಾಗಿದೆ.

ಸಿಇಟಿ ಮೀಸಲಾತಿ: ಪ್ರಸ್ತುತ ವರ್ಷ ಕ್ರೀಡಾ ಕೋಟಾದಡಿ ಸುಮಾರು 115 ಕ್ರೀಡಾಪಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಜಾಗತಿಕ ಹವಾಮಾನ ವೈಪರಿತ್ಯದಿಂದ ದೇಶಾದ್ಯಂತ ಭೀಕರ ಬರ: 

ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ತೀವ್ರ ಉಷ್ಣ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈ ವರ್ಷ ಇಡೀ ದೇಶವೇ ಭೀಕರ ಬರಗಾಲದ ಪರಿಸ್ಥಿತಿಗೆ ತುತ್ತಾಗಿದೆ. ಪ್ರತಿ ಐದರಿಂದ ಆರು ವರ್ಷಗಳಿಗೊಮ್ಮೆ ಆವರ್ತನ ಮಾದರಿಯಲ್ಲಿ ಎದುರಾಗುವ ಈ ಪ್ರಕೃತಿ ವಿಕೋಪಕ್ಕೆ ಪ್ರಮುಖ ಕಾರಣ ‘ಸೂಪರ್ ಎಲ್‌ನಿನೋ’ ಪ್ರಭಾವವಾಗಿದೆ. ಈ ಬಾರಿ ಸಾಗರದ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿಗ್ರಿಗಿಂತಲೂ ಹೆಚ್ಚಾಗಿರುವುದರಿಂದ ಭಾರತದಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದು, ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದರು.

ರಾಜ್ಯದಲ್ಲೂ ಮಳೆಯ ಅಭಾವದಿಂದಾಗಿ ರೈತರು ಕಂಗಾಲಾಗಿದ್ದಾರೆ. ಒಟ್ಟು 340 ತಾಲೂಕುಗಳ ಪೈಕಿ 157 ತಾಲೂಕುಗಳಲ್ಲಿ ತೀವ್ರ ಮಳೆಯ ಕೊರತೆ ಎದುರಾಗಿದ್ದು, ಇದರಲ್ಲಿ 14 ತಾಲೂಕುಗಳು ಅತ್ಯಂತ ಗಂಭೀರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಖುದ್ದಾಗಿ ರಾಜ್ಯದ ಸುಮಾರು 16 ಜಿಲ್ಲೆಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ಭೂಮಿಯ ಶೋಚನೀಯ ಸ್ಥಿತಿಯನ್ನು ವೀಕ್ಷಿಸಿರುವ ಸರ್ಕಾರ, ತಕ್ಷಣದ ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಿದೆ ಎಂದರು.

ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಚನೆ, ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ಬಿಡುಗಡೆ

ಬರ ಪೀಡಿತ ಯಾವುದೇ ಪ್ರದೇಶದಲ್ಲಿ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶಿಸಿದೆ. ನೀರಿನ ತೊಂದರೆ ಹೆಚ್ಚಾಗಿರುವ ಕಡೆಗಳಲ್ಲಿ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ತಲಾ 5 ಕೋಟಿ ರೂಪಾಯಿಗಳ ತುರ್ತು ನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಪತ್ರ: ತುರ್ತು ಎನ್‌ಡಿಆರ್‌ಎಫ್ ನಿಧಿಗೆ ಮನವಿ

ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲು ಮತ್ತು ಸಂತ್ರಸ್ತ ರೈತರಿಗೆ ನೆರವಾಗಲು ಮುಖ್ಯಮಂತ್ರಿಗಳು ಈಗಾಗಲೇ ಪ್ರಧಾನಮಂತ್ರಿಯವರಿಗೆ ಅಧಿಕೃತ ಪತ್ರ ಬರೆದು ಕೇಂದ್ರದ ವಿಶೇಷ ಸಹಾಯವನ್ನು ಕೋರಿದ್ದಾರೆ. ಇದರೊಂದಿಗೆ ಕಂದಾಯ ಸಚಿವರು ಕೂಡ ಕೇಂದ್ರ ಗೃಹ ಸಚಿವರು ಮತ್ತು ಕಂದಾಯ ಮಂತ್ರಿಗಳಿಗೆ ಪತ್ರ ಬರೆದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಅಗತ್ಯವಿರುವ ಮುಂಗಡ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರವು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.

 

 

 


Share this with Friends

Related Post