Fri. Jul 17th, 2026

ಮೈಸೂರು ದಸರಾ ವಸ್ತು ಪ್ರದರ್ಶನ ಇನ್ಮುಂದೆ ‘ವರ್ಷಪೂರ್ತಿ ಓಪನ್’: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬಿಗ್ ಪ್ಲಾನ್!

Share this with Friends

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಐತಿಹಾಸಿಕ ದಸರಾ ವಸ್ತು ಪ್ರದರ್ಶನ ಆವರಣವನ್ನು ಕೇವಲ ಹಬ್ಬಕ್ಕೆ ಸೀಮಿತಗೊಳಿಸದೆ, ವರ್ಷಪೂರ್ತಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ‘ಅಮ್ಯೂಸ್‌ಮೆಂಟ್ ಪಾರ್ಕ್’ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮುಂಬರುವ ದಸರಾ ಮಹೋತ್ಸವ, ನಗರದ ಮೂಲಸೌಕರ್ಯ, ಪಾಲಿಕೆ ಚುನಾವಣೆ ಹಾಗೂ ಬೀದಿಬದಿ ವ್ಯಾಪಾರಿಗಳ ಪುನರ್ವಸತಿ ಕುರಿತು ಹಲವು ದೂರಾಂಗಾಮಿ ನಿರ್ಧಾರಗಳನ್ನು ಪ್ರಕಟಿಸಿದರು.

90 ದಿನಗಳ ಮೆಗಾ ಪ್ರದರ್ಶನ ಮತ್ತು ಹೈಟೆಕ್ ಸೌಲಭ್ಯಗಳು

ವಿಸ್ತರಿತ ಅವಧಿ: ಈ ಬಾರಿಯ ವಸ್ತು ಪ್ರದರ್ಶನವು ದಸರಾ ಹಬ್ಬದ ದಿನದಿಂದಲೇ ಆರಂಭಗೊಂಡು ಒಟ್ಟು 90 ದಿನಗಳ ಕಾಲ ಅಂದರೆ ಜನವರಿ 8, 2027ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಇದರ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ದಾಖಲೆಯ ಪ್ರವಾಸಿಗರು: ಕಳೆದ ವರ್ಷಗಳಲ್ಲಿ 8 ರಿಂದ 9 ಲಕ್ಷದಷ್ಟಿದ್ದ ಪ್ರವಾಸಿಗರ ಸಂಖ್ಯೆಯು ಪ್ರಸ್ತುತ ಸಾಲಿನಲ್ಲಿ ಬರೋಬ್ಬರಿ 15 ಲಕ್ಷದ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆ ಬರೆದಿದೆ.

4 ಕೋಟಿ ವೆಚ್ಚದ ಕಾಮಗಾರಿ: ಪ್ರವಾಸಿಗರಿಗೆ ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಅತ್ಯಾಧುನಿಕ ಶೆಲ್ಟರ್ ಒಳಗೊಂಡ ಶಾಶ್ವತ ಫುಡ್ ಕೋರ್ಟ್ ಹಾಗೂ 32 ಶಾಶ್ವತ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷ ತಾತ್ಕಾಲಿಕ ಮಳಿಗೆಗಳಿಗೆ ವ್ಯರ್ಥವಾಗುತ್ತಿದ್ದ ಹಣವನ್ನು ಉಳಿಸಲು ‘ಸಿದ್ದರಾಮಯ್ಯ ಪ್ರದರ್ಶನ ಅಂಗಳ’ದಲ್ಲಿ ಕಾಯಂ ಮಳಿಗೆಗಳನ್ನು ಕಲ್ಪಿಸಲಾಗಿದೆ.

ಮನರಂಜನೆ: ಸಂಗೀತ ಕಾರಂಜಿ, ಲೇಸರ್ ಶೋ, ಬೋಟಿಂಗ್ ಮತ್ತು ‘ರಾಜೀವ್ ಗಾಂಧಿ ಡ್ರ್ಯಾಗನ್ ಪಾಂಡ್’ನಲ್ಲಿ ಬೆಂಕಿ ಉಗುಳುವ ಡ್ರ್ಯಾಗನ್ ಪ್ರದರ್ಶನ ಈ ಬಾರಿಯೂ ಮುಂದುವರಿಯಲಿದೆ. ವಸ್ತು ಪ್ರದರ್ಶನದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ವಿಶೇಷ ಅನುದಾನ ಕೋರಿ ಮನವಿ ಸಲ್ಲಿಸಲಾಗುವುದು.

ವಿಜೃಂಭಣೆಯ ದಸರಾ ಮತ್ತು ‘ಕಂಬಳ’ ಆಯೋಜನೆ

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ದಸರಾವನ್ನು ಸರಳವಾಗಿ ಆಚರಿಸಬೇಕೆಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಆದರೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ಚರ್ಚೆಯ ಬಳಿಕ, ಪ್ರತಿವರ್ಷದಂತೆ ಈ ಬಾರಿಯೂ ದಸರಾವನ್ನು ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದಲೇ ಆಚರಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ, ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಮೈಸೂರು ದಸರಾದಲ್ಲಿ ಆಯೋಜಿಸಲು ಸಮಿತಿಯ ಬಹುತೇಕ ಶಾಸಕರು ಒಲವು ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ದಸರಾ ಆರಂಭವಾಗುವುದಕ್ಕಿಂತ ಮುಂಚಿತವಾಗಿಯೇ ನಗರದ ಎಲ್ಲಾ ರಸ್ತೆಗಳ ರಿಪೇರಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ಗಳಿಗೆ ಗಡುವು ನೀಡಲಾಗಿದೆ.

ಮೈಸೂರು ಪಾಲಿಕೆ ಚುನಾವಣೆ ವಿಳಂಬಕ್ಕೆ ಅಸಲಿ ಕಾರಣ

ಮೈಸೂರು ನಗರವನ್ನು ‘ಬೃಹತ್ ಮೈಸೂರು’ (Greater Mysuru) ಮಾಡಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ದೇಶದಲ್ಲಿ ಜನಗಣತಿ (Census) ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಗಡಿ ಬದಲಾವಣೆ ಮಾಡಲು ಬರುವುದಿಲ್ಲ ಎಂದು ರಾಜ್ಯಪಾಲರು ತಿಳಿಸಿದ್ದರಿಂದ ಚುನಾವಣೆ ತಡವಾಗಿದೆ. ಆದರೆ, ಇನ್ನು ಮುಂದೆ ಜನಗಣತಿ ಮುಗಿಯುವವರೆಗೆ ಕಾಯುವುದು ಬೇಡ ಎಂದು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಸಿಎಂ ಹಾಗೂ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮೈಸೂರು ಪಾಲಿಕೆ ಚುನಾವಣೆ ನಡೆಸಲಾಗುವುದು. ಇನ್ನು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಈ ವರ್ಷದ ನವೆಂಬರ್‌ನಲ್ಲಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಇದೇ ವರ್ಷ ನಡೆಸಲು ಗ್ರಾಮೀಣಾಭಿವೃದ್ಧಿ ಸಚಿವರು ಒಲವು ತೋರಿದ್ದಾರೆ ಎಂದರು.

ಸಿಟಿ ಟ್ರಾಫಿಕ್‌ಗೆ ಬ್ರೇಕ್; ಮೈಸೂರಿಗೆ ‘ಫುಡ್ ಸ್ಟ್ರೀಟ್’ ಭಾಗ್ಯ

ಹೊರವಲಯದಲ್ಲಿ ಮೈದಾನ: ಮೈಸೂರು ನಗರದ ಮಧ್ಯಭಾಗದಲ್ಲಿ ಬೃಹತ್ ರ್ಯಾಲಿಗಳು, ಖಾಸಗಿ ಕಾರ್ಯಕ್ರಮಗಳು ಹಾಗೂ ಸಂಗೀತ ಕಚೇರಿಗಳನ್ನು ನಡೆಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ನಗರದ ಹೊರವಲಯದಲ್ಲಿ ಪ್ರತ್ಯೇಕ ಮೈದಾನವೊಂದನ್ನು ಮೀಸಲಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಬೀದಿ ಬದಿ ವ್ಯಾಪಾರಿಗಳ ರಕ್ಷಣೆ: ಬೆಂಗಳೂರಿನಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಅನಿವಾರ್ಯವಾಗಿದೆ. ಆದರೆ ಮೈಸೂರಿನಲ್ಲಿ ಮಾನವೀಯತೆಯ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಟಿಸ್ ನೀಡಿ, ಪರ್ಯಾಯ ಜಾಗ ಕಲ್ಪಿಸಿ ನಂತರ ತೆರವು ಮಾಡಲಾಗುವುದು. ಮೈಸೂರಿನಲ್ಲಿ ಇದಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಹಾಗೂ ಹೈಟೆಕ್ ‘ಫುಡ್ ಸ್ಟ್ರೀಟ್’ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ಕಾರ್ಯಕರ್ತರಿಗೆ ಸ್ಥಾನ: ದಸರಾ ಸಂದರ್ಭದಲ್ಲಿ ಉಪಸಮಿತಿಗಳನ್ನು ರಚಿಸುವಾಗ ನಿಯಮಿತ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಮುಂದಿನ ತಿಂಗಳು ಕಡ್ಡಾಯವಾಗಿ ಕೆ.ಡಿ.ಪಿ (KDP) ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗುವುದು ಎಂದು ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದರು.

 

 

 


Share this with Friends

Related Post