Fri. Jul 17th, 2026

ದಸರಾ ಕಂಬಳ ವಿವಾದದ ನಡುವೆ ಬಿಗ್ ನ್ಯೂಸ್: ಕರಾವಳಿಯ 23 ಕಂಬಳಗಳಿಗೆ ₹1.15 ಕೋಟಿ ಅನುದಾನ ಪ್ರಕಟಿಸಿದ ಸರ್ಕಾರ!

Share this with Friends

ಉಡುಪಿ: ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಆಯೋಜಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರಾವಳಿ ಭಾಗದ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಒಟ್ಟು 1 ಕೋಟಿ 15 ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ.

ತಲಾ 5 ಲಕ್ಷ ರೂಪಾಯಿ ನೆರವು:

2025-26ನೇ ಸಾಲಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ಆಯೋಜನೆಯಾಗಲಿರುವ ಒಟ್ಟು 23 ಕರಾವಳಿ ಕಂಬಳಗಳಿಗೆ ಈ ಆರ್ಥಿಕ ನೆರವು ಸಿಗಲಿದೆ. ಪ್ರತಿ ಕಂಬಳ ಕೂಟಕ್ಕೆ ತಲಾ 5 ಲಕ್ಷ ರೂಪಾಯಿಯಂತೆ ಈ ಧನಸಹಾಯವನ್ನು ನೇರವಾಗಿ ವಿತರಿಸಲಾಗುತ್ತಿದ್ದು, ಸರ್ಕಾರದ ಈ ಪ್ರಕಟಣೆಯನ್ನು ಕಂಬಳ ಸಂಘಟಕರು ಮುಕ್ತವಾಗಿ ಸ್ವಾಗತಿಸಿದ್ದಾರೆ.

ಸಂಘಟಕರ ತೂಕದ ಮಾತು:

ಈ ಮಹತ್ವದ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಅವರು, “ಕಂಬಳ ಕೂಟಗಳನ್ನು ಅತ್ಯಂತ ವೈಭವದಿಂದ ನಡೆಸುವುದು ಆಯೋಜಕರಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಸರ್ಕಾರವು ನುಡಿದಂತೆ ನಡೆದುಕೊಂಡು ಈ ನೆರವು ನೀಡಿದೆ. ಮುಂದಿನ ರಾಜ್ಯ ಬಜೆಟ್‌ನಲ್ಲಿ ಕಂಬಳ ಕ್ರೀಡೆಗಾಗಿ ಕನಿಷ್ಠ 5 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು” ಎಂದು ಬೇಡಿಕೆ ಇಟ್ಟಿದ್ದಾರೆ.

ಮೈಸೂರು ದಸರಾ ಕಂಬಳ ವಿವಾದಕ್ಕೆ ತಿರುಗೇಟು:

ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವುದನ್ನು ವಿರೋಧಿಸುತ್ತಿರುವ ಮೈಸೂರಿನ ಕೆಲವು ನಾಯಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಕಂಬಳ ಸಮಿತಿ, “ಕಂಬಳವು ಕೇವಲ ಒಂದು ನಿರ್ದಿಷ್ಟ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಕ್ರೀಡೆಯಾಗಿದ್ದು, ಹಿಂದುಳಿದ ವರ್ಗದ ಕೋಟಿ ಚೆನ್ನಯ್ಯ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಗೌರವಯುತವಾಗಿ ನಡೆಯುತ್ತದೆ. ನಮ್ಮ ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗದೆ, ಕಂಬಳದ ಸಾಂಸ್ಕೃತಿಕ ಪರಂಪರೆಯನ್ನು ಮೈಸೂರು ಸೇರಿದಂತೆ ರಾಜ್ಯಾದ್ಯಂತ ಹೆಮ್ಮೆಯಿಂದ ವಿಸ್ತರಿಸಲು ಧೈರ್ಯ ತೋರಬೇಕು” ಎಂದು ಕರೆ ನೀಡಿದ್ದಾರೆ.

 

 


Share this with Friends

Related Post