Sat. Jun 6th, 2026

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ, ವಿಜಯೇಂದ್ರ ನೇತೃತ್ವದಲ್ಲೇ 2027ರ ಚುನಾವಣೆ: ರಾಧಾಮೋಹನ್ ದಾಸ್ ಸ್ಪಷ್ಟನೆ

Share this with Friends

ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಎನ್ನುವುದು ಮೂರು ದಿನಗಳಲ್ಲಿ ಸಂದರ್ಶನ ನಡೆಸಿ ನೇಮಕ ಮಾಡುವ ಸಂಬಳದ ಉದ್ಯೋಗವಲ್ಲ. ಸದ್ಯಕ್ಕೆ ಪಕ್ಷದಲ್ಲಿ ಪೂರ್ಣಾವಧಿ ಹಾಗೂ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ. ಅವರ ನೇತೃತ್ವದಲ್ಲೇ ಮುಂದಿನ 2027ರ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ,” ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬದಲಾವಣೆ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಸಂಪೂರ್ಣ ತೆರೆ ಎಳೆದಿದ್ದಾರೆ.

ಅಧ್ಯಕ್ಷರ ಮೌಲ್ಯಮಾಪನ ಭ್ರಮೆ: ಪ್ರಸ್ತುತ ಸಭೆಯಲ್ಲಿ ರಾಜ್ಯಾಧ್ಯಕ್ಷರ ಮೌಲ್ಯಮಾಪನ ನಡೆಯುತ್ತಿದೆ ಎಂಬುದು ಕೆಲವರ ಭ್ರಮೆ ಅಷ್ಟೆ. ಪಕ್ಷದಲ್ಲಿ ನಾಯಕರ ಕೆಲಸ ಕಾರ್ಯಗಳ ನಿರಂತರ ಮೌಲ್ಯಮಾಪನ ದೆಹಲಿ ಮಟ್ಟದಲ್ಲೇ ನಡೆಯುತ್ತಿರುತ್ತದೆ. ಅದಕ್ಕಾಗಿ ಇಲ್ಲಿಗೆ ಬರುವ ಅಗತ್ಯವಿಲ್ಲ. ನಾನು ಯಾವುದೇ ಒಬ್ಬ ಅಧ್ಯಕ್ಷರ ಕಾರ್ಯಕರ್ತನಲ್ಲ, ಬದಲಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ರಾಧಾಮೋಹನ್ ದಾಸ್ ಖಡಕ್ಕಾಗಿ ನುಡಿದರು.

ಕೋರ್ ಕಮಿಟಿ ಬದಲಾವಣೆ ಹೈಕಮಾಂಡ್ ನಿರ್ಧಾರ: ಭವಿಷ್ಯದಲ್ಲಿ ರಾಷ್ಟ್ರೀಯ ಘಟಕವು ಹೊಸ ಅಧ್ಯಕ್ಷರನ್ನು ಅಧಿಕೃತವಾಗಿ ಘೋಷಿಸಿದಾಗ ಮಾತ್ರ ಹಳೆಯ ತಂಡದ ಜಾಗಕ್ಕೆ ಹೊಸ ತಂಡ ಬರುವುದು ಸಹಜ ಪ್ರಕ್ರಿಯೆ. ಆದರೆ ಹೊಸ ಅಧ್ಯಕ್ಷರು ಬಂದ ತಕ್ಷಣ ಕೋರ್ ಕಮಿಟಿ ಬದಲಾಗುವುದಿಲ್ಲ. ಅದರಲ್ಲಿ ಒಂದಿಬ್ಬರು ಹಳೆಯ ಮುಖಗಳು ಬದಲಾಗಬಹುದೇ ವಿನಃ ಸಂಪೂರ್ಣ ಬದಲಾವಣೆಯ ತೀರ್ಮಾನವನ್ನು ರಾಷ್ಟ್ರೀಯ ಘಟಕವೇ ಕೈಗೊಳ್ಳುತ್ತದೆ.

2027ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ: ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿಯವರ ಭೇಟಿಯ ಮುಖ್ಯ ಉದ್ದೇಶ 2027ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದಾಗಿದೆ. ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ, ತುಷ್ಟೀಕರಣ ರಾಜಕಾರಣದಲ್ಲಿ ಮುಳುಗಿದ್ದು, ಜನರಿಗೆ ಗ್ಯಾರಂಟಿಗಳನ್ನು ಸರಿಯಾಗಿ ನೀಡದೆ ವಂಚಿಸಿದೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನದ್ದು ಬೆಕ್ಕು-ಮಂಗನ ಜಗಳ:

ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತದ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗ್ರವಾಲ್, “ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರು ಮಂಗನಂತೆ ವರ್ತಿಸುತ್ತಾ, ಇಲ್ಲಿನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂಬ ಇಬ್ಬರು ಬೆಕ್ಕುಗಳ ನಡುವೆ ಜಗಳ ತಂದಿಡುತ್ತಿದ್ದಾರೆ,” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಖರ್ಗೆ ಸಿಎಂ ಆಗಲು ಸ್ಕೆಚ್?: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಂಡರೆ, ತಮಗೆ ಮುಖ್ಯಮಂತ್ರಿಯಾಗಲು ಅವಕಾಶ ಸಿಗಬಹುದು ಎಂದು ಖರ್ಗೆಯವರು ಕಾಯುತ್ತಿದ್ದಾರೆ. ಇಲ್ಲಿ ಸಿಎಂ ಹುದ್ದೆಗೆ ಕೇವಲ ಇಬ್ಬರ ಮುಖಗಳಿಲ್ಲ, ಮೂರು ಜನರಿದ್ದಾರೆ ಎಂದು ರಾಧಾಮೋಹನ್ ದಾಸ್ ಹೊಸ ವಿಶ್ಲೇಷಣೆ ನೀಡಿದ್ದಾರೆ.

ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು: ಸದ್ಯ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆಡಳಿತ ಪಕ್ಷದ ಹಲವಾರು ಶಾಸಕರು ಈಗಾಗಲೇ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ನಾಳೆಯೇ ವಿಧಾನಸಭೆ ಚುನಾವಣೆ ಎದುರಾದರೂ ಸಹ ಜನತೆ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಿವಾಳಿಯಾದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರವು ಹೊರಗಡೆಯಿಂದ ವಿಪರೀತ ಸಾಲ ಪಡೆದಿರುವುದರಿಂದ ಇಡೀ ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಆರೇಳು ತಿಂಗಳುಗಳಿಂದ ರಾಜ್ಯದಲ್ಲಿ ಆಡಳಿತವೇ ಇಲ್ಲದಂತಾಗಿದ್ದು, ನಾಯಕರು ಕೇವಲ ಕುರ್ಚಿ ಜಗಳದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

 


Share this with Friends

Related Post