Sat. Jun 6th, 2026

ಬಿಜೆಪಿ, ಕಾಂಗ್ರೆಸ್ ಹಿಂದಿಕ್ಕಿದ ‘ಜಿರಳೆ ಪಕ್ಷ’: ಇನ್‌ಸ್ಟಾಗ್ರಾಮ್‌ನಲ್ಲಿ 16.4 ಮಿಲಿಯನ್ ಫಾಲೋವರ್ಸ್ ದಾಟಿ ದಾಖಲೆ ಬರೆದ ಸಿಜೆಪಿ!

Share this with Friends

ಬೆಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿನೂತನ ಸಾಮಾಜಿಕ ಜಾಲತಾಣದ ಕ್ರಾಂತಿಯೊಂದು ಸೃಷ್ಟಿಯಾಗಿದ್ದು, ಕೇವಲ ಕೆಲವೇ ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಅಥವಾ ಜಿರಳೆ ಪಕ್ಷವು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 16.4 ಮಿಲಿಯನ್ (1.5 ಕೋಟಿಗೂ ಹೆಚ್ಚು) ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪುಟಗಳನ್ನೇ ಧೂಳೀಪಟ ಮಾಡಿದೆ.

ಯುವ ಜನಾಂಗ, ನಿರುದ್ಯೋಗಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ‘ಜೆನ್-ಝಿ’ (Gen-Z) ತಲೆಮಾರಿನ ಜನರು ಈ ಜಿರಳೆ ಪಕ್ಷಕ್ಕೆ ಮುಗಿಬಿದ್ದು ಬೆಂಬಲ ಸೂಚಿಸುತ್ತಿದ್ದಾರೆ.

ಏನಿದು ಕಾಕ್ರೋಚ್ ಜನತಾ ಪಾರ್ಟಿ (CJP)?: ನ್ಯಾಯಾಲಯದ ವಿಚಾರಣೆಯೊಂದರ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಿರುದ್ಯೋಗಿ ಯುವಕರನ್ನು “ಜಿರಳೆಗಳು” ಎಂದು ಸಂಬೋಧಿಸಲಾಗಿದೆ ಎಂಬ ಚರ್ಚೆ ಆನ್‌ಲೈನ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ತಂತ್ರಜ್ಞರೊಬ್ಬರು ವ್ಯಂಗ್ಯವಾಗಿ (Satire) ಈ “ಕಾಕ್ರೋಚ್ ಜನತಾ ಪಾರ್ಟಿ”ಯನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದರು.

ಬಿಜೆಪಿ, ಕಾಂಗ್ರೆಸ್‌ಗಿಂತ ಮುಂದೆ: ಕೇವಲ ಕೆಲವೇ ದಿನಗಳಲ್ಲಿ ಈ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ವೇಗವಾಗಿ ಬೆಳೆದ ಪೇಜ್ ಆಗಿ ಹೊರಹೊಮ್ಮಿದೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಖಾತೆಯು ಸುಮಾರು 8.7 ಮಿಲಿಯನ್ ಮತ್ತು ಕಾಂಗ್ರೆಸ್ 13.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಈ ಜಿರಳೆ ಪಕ್ಷವು ಎಲ್ಲರನ್ನೂ ಹಿಂದಿಕ್ಕಿ 16.4 ಮಿಲಿಯನ್‌ ಗಡಿ ದಾಟಿದೆ.

ನಿರುದ್ಯೋಗಿಗಳ ಧ್ವನಿ: “ಸೋಮಾರಿಗಳು ಮತ್ತು ನಿರುದ್ಯೋಗಿಗಳ ಧ್ವನಿ” (Voice of the Lazy and Unemployed) ಎಂಬ ಘೋಷಣೆಯೊಂದಿಗೆ ಆರಂಭವಾಗಿರುವ ಈ ಆಂದೋಲನವು, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ, ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ರಾಜಕೀಯ ವ್ಯವಸ್ಥೆಯ ವಿರುದ್ಧ ಯುವಜನತೆಗಿರುವ ತೀವ್ರ ಅಸಮಾಧಾನವನ್ನು ವ್ಯಂಗ್ಯಚಿತ್ರ (Memes), ರೀಲ್ಸ್ ಹಾಗೂ ತಂತ್ರಜ್ಞಾನ ಆಧಾರಿತ ಹಾಡುಗಳ ಮೂಲಕ ಹೊರಹಾಕುತ್ತಿದೆ.

ಕರ್ನಾಟಕದಲ್ಲೂ ಭಾರಿ ಕ್ರೇಜ್: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಸಿಜೆಪಿ ಟ್ರೆಂಡ್ ಸೃಷ್ಟಿಸಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ‘ಸಿಜೆಪಿ’ ಬ್ರ್ಯಾಂಡ್‌ನ ಟಿ-ಶರ್ಟ್‌ಗಳು ಬಿಡುಗಡೆಯಾಗಿವೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಪ್ರಮುಖ ನಟಿಯೊಬ್ಬರು ಕೂಡ ಈ ವೈರಲ್ ಮೂವ್‌ಮೆಂಟ್‌ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.

ಎಕ್ಸ್ (X) ಖಾತೆ ಮುಟ್ಟುಗೋಲು: ಈ ಜಿರಳೆ ಪಕ್ಷದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ತಾಂತ್ರಿಕ ಕಾರಣಗಳನ್ನು ನೀಡಿ ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೂ ಇನ್‌ಸ್ಟಾಗ್ರಾಮ್‌ನಲ್ಲಿ ಇದರ ಕ್ರೇಜ್ ಕಮ್ಮಿಯಾಗಿಲ್ಲ.

 


Share this with Friends

Related Post