Fri. Jun 5th, 2026

ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವೆ, ಕೊನೆಯುಸಿರಿರೋವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ಸಿದ್ದರಾಮಯ್ಯ

Share this with Friends

ಬೆಂಗಳೂರು: “ನನ್ನ ರಾಜೀನಾಮೆ ಕೇವಲ ಮುಖ್ಯಮಂತ್ರಿ ಹುದ್ದೆಗೆ ಮಾತ್ರ ಸೀಮಿತವಾಗಿದ್ದು, ಸಕ್ರಿಯ ರಾಜಕಾರಣಕ್ಕಲ್ಲ. ಜೀವದ ಕೊನೆಯುಸಿರು ಇರುವವರೆಗೂ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯಲಿದೆ” ಎಂದು ಸಿದ್ದರಾಮಯ್ಯ ಅವರು ಭಾವುಕರಾಗಿ ನುಡಿದಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಹಮ್ಮಿಕೊಂಡಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ರಾಜಕೀಯ ಸಿದ್ಧಾಂತ ಮತ್ತು ಕನ್ನಡಿಗರಿಗೆ ಇರುವ ಕೃತಜ್ಞತೆಯನ್ನು ಹಂಚಿಕೊಂಡರು.

ಸಂವಿಧಾನದಿಂದಲೇ ನನ್ನ ಕನಸು ನನಸಾಗಿದೆ

ಸುದ್ದಿಗೋಷ್ಠಿಯಲ್ಲಿ ತಮ್ಮ ಹಳೆಯ ದಿನಗಳನ್ನು ಸ್ಮರಿಸಿದ ಸಿದ್ದರಾಮಯ್ಯ, “ಹಳ್ಳಿಗಾಡಿನ ಸಾಮಾನ್ಯ ವಾತಾವರಣದಲ್ಲಿ ಹುಟ್ಟಿ ಬೆಳೆದ ನಾನು, ಮುಂದೊಂದು ದಿನ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಇಂತಹದೊಂದು ದೊಡ್ಡ ಗೌರವ ನನಗೆ ಸಿಗಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ” ಎಂದು ಹೆಮ್ಮೆಯಿಂದ ಹೇಳಿದರು.

48 ವರ್ಷಗಳ ರಾಜಕೀಯ ಸಾರ್ಥಕತೆ

ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರೇ ನನ್ನ ಬದುಕಿನ ಆದರ್ಶ ಎಂದ ಸಿದ್ದರಾಮಯ್ಯ, “ನನ್ನ 48 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನಾಡಿನ ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಸಂವಿಧಾನವೇ ನನ್ನ ಧರ್ಮ ಮತ್ತು ಜನರೇ ನನ್ನ ಪಾಲಿನ ದೇವರು” ಎಂದರು.

ವರಿಷ್ಠರು ಮತ್ತು ಕನ್ನಡಿಗರಿಗೆ ಧನ್ಯವಾದ

ತಮಗೆ ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಶಾಸಕರು, ಜೊತೆಗೆ ನಿಂತ ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಿದರು. ತಮ್ಮನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕೈಹಿಡಿದು ನಡೆಸಿದ ನಾಡಿನ ಸಮಸ್ತ ಹೃದಯವಂತ ಕನ್ನಡಿಗರಿಗೆ ತಾವು ಸದಾ ಚಿರಋಣಿ ಎಂದು ಭಾವುಕರಾಗಿ ನುಡಿದರು.

 


Share this with Friends

Related Post