ಬೆಂಗಳೂರು: ಕಳೆದ ಕೆಲವು ದಿನಗಳಿಂದ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೈ-ವೋಲ್ಟೇಜ್ ರಾಜಕೀಯ ವಿದ್ಯಮಾನಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಮುಖ ಸಚಿವರೊಂದಿಗೆ ರಾಜಭವನದ (ಲೋಕಭವನ) ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು, ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವೈಯಕ್ತಿಕ ಕಾರಣಗಳಿಗಾಗಿ ಸದ್ಯ ನಗರದಲ್ಲಿ ಲಭ್ಯವಿಲ್ಲದ ಕಾರಣ, ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ನೀಡಲಾಗಿದೆ.
ಹೈಕಮಾಂಡ್ ಆದೇಶ ಪಾಲಿಸಿದ್ದೇನೆ: ಸಿದ್ದರಾಮಯ್ಯ
ರಾಜೀನಾಮೆ ಸಲ್ಲಿಕೆಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಎರಡು ದಿನಗಳ ಹಿಂದೆಯೇ ಹೈಕಮಾಂಡ್ ನನಗೆ ಈ ನಿರ್ದೇಶನ ನೀಡಿತ್ತು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಈ ತೀರ್ಮಾನ ಕೈಗೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
೨,೯೦೨ ದಿನಗಳ ಆಡಳಿತ: ಮುರಿದುಬಿದ್ದ ದೇವರಾಜ ಅರಸು ದಾಖಲೆ!
ಎರಡು ಅವಧಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಒಟ್ಟು ೨,೯೦೨ ದಿನಗಳ ಕಾಲ ಅಧಿಕಾರ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇದರೊಂದಿಗೆ, ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಕಾಲ ಸಿಎಂ ಆಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ (೨,೭೯೨ ದಿನಗಳು) ಸುದೀರ್ಘ ಅವಧಿಯ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ.
ಮುಂದಿನ ಸಿಎಂ ಯಾರು?
ಕಾಂಗ್ರೆಸ್ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಜಾತಿ ಸಮೀಕರಣವನ್ನು ಸರಿದೂಗಿಸಲು ಇಬ್ಬರು ಅಥವಾ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಸಾಧ್ಯತೆಯೂ ಇದೆ ಎಂದು ದೆಹಲಿ ವಲಯಗಳಿಂದ ತಿಳಿದುಬಂದಿದೆ.
ಇದೇ ವೇಳೆ, ಮುಖ್ಯಮಂತ್ರಿ ಸ್ಥಾನ ತ್ಯಜಿಸಿರುವ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ಹಾಗೂ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿದೆ ಎನ್ನಲಾಗಿದೆ.
ರಾಜ್ಯಾದ್ಯಂತ ಅಭಿಮಾನಿಗಳ ಆಕ್ರೋಶ, ಕಣ್ಣೀರು
ಸಿದ್ದರಾಮಯ್ಯ ಅವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಧಿಕೃತ ನಿವಾಸ ‘ಕಾವೇರಿ’ಯ ಬಳಿ ಜಮಾಯಿಸಿದ ನೂರಾರು ಬೆಂಬಲಿಗರು ಭಾವುಕರಾದರು. ಶಿವಮೊಗ್ಗ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಟೈರ್ ಬೂದಿ ಮಾಡಿ ಹೈಕಮಾಂಡ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.

