ಹುಬ್ಬಳ್ಳಿ: ಬೇಸಿಗೆ ರಜೆಯ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ರಾಮೇಶ್ವರಂಗೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಒಟ್ಟು ಒಂಬತ್ತು ಟ್ರಿಪ್‌ಗಳಲ್ಲಿ ಈ ರೈಲುಗಳು ಸಂಚರಿಸಲಿವೆ.
ವೇಳಾಪಟ್ಟಿ ಮತ್ತು ದಿನಾಂಕ:
ರೈಲು ಸಂಖ್ಯೆ 07355 ಹುಬ್ಬಳ್ಳಿ–ರಾಮೇಶ್ವರಂ ವಿಶೇಷ ರೈಲು ಏಪ್ರಿಲ್ 5 ರಿಂದ ಮೇ 31 ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 06:50ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಇದು ಮರುದಿನ ಬೆಳಿಗ್ಗೆ 05:20ಕ್ಕೆ ರಾಮೇಶ್ವರಂ ತಲುಪಲಿದೆ.
ಅದೇ ರೀತಿ, ರೈಲು ಸಂಖ್ಯೆ 07356 ರಾಮೇಶ್ವರಂ–ಹುಬ್ಬಳ್ಳಿ ವಿಶೇಷ ರೈಲು ಏಪ್ರಿಲ್ 6 ರಿಂದ ಜೂನ್ 1 ರವರೆಗೆ ಪ್ರತಿ ಸೋಮವಾರ ರಾತ್ರಿ 08:00ಕ್ಕೆ ರಾಮೇಶ್ವರಂನಿಂದ ಹೊರಟು, ಮರುದಿನ ರಾತ್ರಿ 07:40ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಪ್ರಮುಖ ನಿಲುಗಡೆಗಳು:
ಈ ವಿಶೇಷ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮಧುರೈ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಬೋಗಿಗಳ ವಿವರ:
ಪ್ರಯಾಣಿಕರ ಸೌಕರ್ಯಕ್ಕಾಗಿ ಈ ರೈಲಿನಲ್ಲಿ ಎಸಿ ಫಸ್ಟ್ ಕ್ಲಾಸ್, ಎಸಿ ಟೂ-ಟೈರ್, ಎಸಿ ತ್ರೀ-ಟೈರ್, ಸ್ಲೀಪರ್ ಕ್ಲಾಸ್ ಹಾಗೂ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳನ್ನು ಅಳವಡಿಸಲಾಗಿದೆ. ಜೊತೆಗೆ ಪ್ಯಾಂಟ್ರಿ ಕಾರ್ ಮತ್ತು ದಿವ್ಯಾಂಗ ಸ್ನೇಹಿ ಬೋಗಿಗಳ ಸೌಲಭ್ಯವೂ ಇದೆ.
ಈಗಾಗಲೇ ಈ ರೈಲುಗಳ ಮುಂಗಡ ಕಾಯ್ದಿರಿಸುವಿಕೆ (Booking) ಪ್ರಾರಂಭವಾಗಿದ್ದು, ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳಕ್ಕೆ ತೆರಳುವ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ

