ಕಲಘಟಗಿ: ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಮನೆಗಳ ದುಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮಾನವೀಯತೆ ಮೆರೆದಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಉಚಿತವಾಗಿ ಹೆಂಚುಗಳನ್ನು ವಿತರಿಸುವ ಮೂಲಕ ಜನರ ಸಂಕಷ್ಟಕ್ಕೆ ಧಾವಿಸಿದ್ದಾರೆ.

ಕಳೆದ ಮಾ. 17ರಂದು ಸುರಿದ ಅಕಾಲಿಕ ಮಳೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳ ಹೆಂಚುಗಳು ಪುಡಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಚಾಪೂರ ಗ್ರಾಮದ ಸುಮಾರು 250ಕ್ಕೂ ಹೆಚ್ಚು ಮನೆಗಳಿಗೆ ಒಟ್ಟು 50 ಸಾವಿರ ಹೆಂಚುಗಳನ್ನು ಮಂಗಳವಾರ ವಿತರಿಸಲಾಯಿತು.

ಪ್ರಸ್ತುತ ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನದಲ್ಲಿ ಕಾರ್ಯಮಗ್ನರಾಗಿರುವ ಸಚಿವರು, ಕ್ಷೇತ್ರದ ಹಾನಿಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ಹಾಗೂ ತಮ್ಮ ಬೆಂಬಲಿಗರ ಮೂಲಕ ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದ್ದರು. ಅದರಂತೆ ತುರ್ತಾಗಿ ಹೆಂಚುಗಳ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರದಲ್ಲೇ ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
“ಕ್ಷೇತ್ರದಲ್ಲಿ ಅತಿವೃಷ್ಟಿ ಅಥವಾ ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಸಚಿವರು ತಕ್ಷಣ ಸ್ಪಂದಿಸುತ್ತಿದ್ದಾರೆ. ಈ ಹಿಂದೆಯೂ ನೆರೆ ಬಂದಾಗ ಆಹಾರದ ಕಿಟ್ ನೀಡಿ ಸಹಾಯ ಮಾಡಿದ್ದರು. ಈಗ ಅಧಿವೇಶನದಲ್ಲಿದ್ದರೂ ನಮ್ಮ ಸಂಕಷ್ಟ ಅರಿತು ಹೆಂಚು ವಿತರಿಸಿರುವುದು ಶ್ಲಾಘನೀಯ” ಎಂದು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

