ಬೆಂಗಳೂರು: ಕರುನಾಡಿನ ಮನೆಮಾತಾಗಿರುವ ‘ನಂದಿನಿ’ ಹಾಲು ಮತ್ತು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡ ಐಪಿಎಲ್-2026ರ ಸೀಸನ್‌ಗಾಗಿ ಕೈಜೋಡಿಸಿವೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಈ ಬಾರಿ RCB ತಂಡದ ‘ಅಧಿಕೃತ ಡೈರಿ ಪಾಲುದಾರ’ (Official Dairy Partner) ಆಗಿ ಕಾರ್ಯನಿರ್ವಹಿಸಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಕಳೆದ ಸೀಸನ್‌ನಲ್ಲಿ (IPL-2025) ಚಾಂಪಿಯನ್ ಪಟ್ಟ ಅಲಂಕರಿಸಿದ RCB ತಂಡದ ಜೊತೆ ನಂದಿನಿ ಸಂಸ್ಥೆ ಒಪ್ಪಂದ ಮಾಡಿಕೊಂಡಿರುವುದು ವಿಶೇಷ. ಮಾರ್ಚ್ 28ರಿಂದ ಆರಂಭವಾಗಲಿರುವ ಟಿ-20 ಕ್ರಿಕೆಟ್ ಸಂಭ್ರಮದಲ್ಲಿ ಕರ್ನಾಟಕದ ಅಪ್ಪಟ ಬ್ರಾಂಡ್ ಆದ ನಂದಿನಿ, ಕ್ರೀಡಾ ಸ್ಫೂರ್ತಿಯನ್ನು ಹೆಚ್ಚಿಸಲು ಸಜ್ಜಾಗಿದೆ.
ಈ ಸಹಭಾಗಿತ್ವದ ಕುರಿತು ಮಾತನಾಡಿದ KMF ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, “ನಂದಿನಿ ಸದಾ ಯುವಜನತೆ ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಕರ್ನಾಟಕದ ಎರಡು ಬಲಿಷ್ಠ ಬ್ರಾಂಡ್‌ಗಳಾದ ನಂದಿನಿ ಮತ್ತು RCB ಒಂದಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ನಮಗೆ ಸಿಕ್ಕ ದೊಡ್ಡ ಅವಕಾಶ” ಎಂದು ಹರ್ಷ ವ್ಯಕ್ತಪಡಿಸಿದರು.
ಆರ್.ಸಿ.ಬಿ ಸಿಇಒ ರಾಜೇಶ್ ಮೆನನ್ ಮಾತನಾಡಿ, “ನಂದಿನಿಯಂತಹ ವಿಶ್ವಾಸಾರ್ಹ ಬ್ರಾಂಡ್ ಜೊತೆಗಿನ ಈ ಮೈತ್ರಿ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ” ಎಂದರು.
ಈ ಸೀಸನ್‌ನಲ್ಲಿ ನಂದಿನಿ ಬ್ರಾಂಡ್ ವತಿಯಿಂದ ಕ್ರೀಡಾಂಗಣದಲ್ಲಿ ಮತ್ತು ಮಾಧ್ಯಮಗಳಲ್ಲಿ ವಿಶೇಷ ಜಾಹೀರಾತು ಚಟುವಟಿಕೆಗಳು ಹಾಗೂ ಅಭಿಮಾನಿಗಳಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

