Sat. Jun 6th, 2026

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಮಹಿಳೆಯರಿಗೆ ₹2,000, 3 ಲಕ್ಷ ಉದ್ಯೋಗದ ಭರವಸೆ

Share this with Friends

ಚೆನ್ನೈ: ತಮಿಳುನಾಡಿನ ಎಲ್ಲಾ ವರ್ಗದ ಜನರ ಹಿತರಕ್ಷಣೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷವು ತನ್ನ ಮಹತ್ವಾಕಾಂಕ್ಷಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಗುರುವಾರ ಚೆನ್ನೈನ ತಮಿಳುನಾಡು ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಣಾಳಿಕೆಯನ್ನು ಲೋಕಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್, ಪ್ರಣಾಳಿಕೆಯ ಪ್ರಮುಖ ಆಕರ್ಷಣೆಯಾಗಿ ಮಹಿಳೆಯರಿಗೆ ಮಾಸಿಕ 2,000 ರೂ. ಧನಸಹಾಯ ಘೋಷಿಸಲಾಗಿದೆ.”ಮಹಿಳೆ ಶಕ್ತಿಶಾಲಿಯಾದರೆ ಇಡೀ ಕುಟುಂಬ ಮತ್ತು ಸಮಾಜ ಬಲಿಷ್ಠವಾಗುತ್ತದೆ. ಆದ್ದರಿಂದ ನೇರ ನಗದು ವರ್ಗಾವಣೆ (DBT) ಮೂಲಕ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ಈ ಮೊತ್ತವನ್ನು ತಲುಪಿಸಲಾಗುವುದು,” ಎಂದು ತಿಳಿಸಿದರು.

ಯುವಜನತೆಗೆ 3 ಲಕ್ಷ ಸರ್ಕಾರಿ ಉದ್ಯೋಗ:

ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಖಾಲಿ ಇರುವ 3 ಲಕ್ಷ ಸರ್ಕಾರಿ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ವಿಶೇಷವೆಂದರೆ, ಯಾವುದೇ ಹುದ್ದೆ ಖಾಲಿಯಾದ 300 ದಿನಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಯುವಜನತೆಗೆ ಉದ್ಯೋಗ ಭದ್ರತೆ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ರೈತರು ಮತ್ತು ಮೀನುಗಾರರ ಹಿತರಕ್ಷಣೆ:

ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ನೀಡಿರುವ ಪಕ್ಷವು, ಭೂ ರಹಿತ ರೈತರಿಗೆ ವಾರ್ಷಿಕವಾಗಿ 6,000 ರೂ. ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ. ಇದರೊಂದಿಗೆ ಮೀನುಗಾರರ ದೀರ್ಘಕಾಲದ ಸಮಸ್ಯೆಗಳ ಪರಿಹಾರ, ಭೂ ದಾಖಲೆಗಳ ಹಂಚಿಕೆ ಯೋಜನೆ ಮತ್ತು ಪಿಂಚಣಿ ದರ ಏರಿಕೆಯಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಕಳೆ:

ತಮಿಳುನಾಡಿನ ಶ್ರೀಮಂತ ಇತಿಹಾಸ ಮತ್ತು ದೇವಾಲಯಗಳ ಮಹತ್ವವನ್ನು ಮನಗಂಡು, ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡಲು ಕಾಂಗ್ರೆಸ್ ಮುಂದಾಗಿದೆ. ಇಡೀ ದೇಶದ ಜನರನ್ನು ತಮಿಳುನಾಡಿನ ಪುಣ್ಯಕ್ಷೇತ್ರಗಳತ್ತ ಆಕರ್ಷಿಸಲು ಪೂರಕ ಯೋಜನೆಗಳನ್ನು ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಜಾತ್ಯತೀತ ಆಡಳಿತದ ವಿಶ್ವಾಸ:

“ಕಾರ್ತಿ ಚಿದಂಬರಂ ಮತ್ತು ಅವರ ತಂಡವು ರಾಜ್ಯದಾದ್ಯಂತ ಸಂಚರಿಸಿ ಜನರ ಭಾವನೆಗಳನ್ನು ಅರಿತು ಈ ಪ್ರಣಾಳಿಕೆ ಸಿದ್ಧಪಡಿಸಿದೆ. ಕಳೆದ ಹತ್ತು ವರ್ಷಗಳಿಂದ ಮೈತ್ರಿ ಸರ್ಕಾರದ ಭಾಗವಾಗಿ ನಾವು ರಾಜ್ಯವನ್ನು ಬಲಿಷ್ಠಗೊಳಿಸಲು ಶ್ರಮಿಸಿದ್ದೇವೆ. ಮುಂದಿನ ಐದು ವರ್ಷಗಳ ಕಾಲವೂ ಜಾತ್ಯತೀತ ತತ್ವದ ಮೇಲೆ ಜನಸೇವೆ ಮಾಡುವ ವಿಶ್ವಾಸ ನಮಗಿದೆ,” ಎಂದು ಡಿ.ಕೆ. ಶಿವಕುಮಾರ್ ಈ ಸಂದರ್ಭದಲ್ಲಿ ಹೇಳಿದರು.

 


Share this with Friends

Related Post