ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವಿರೋಧಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಭದ್ರತೆ, ತಾಂತ್ರಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಬಲಿಕೊಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ (Starlink) ಕುರಿತಾದ ಪೋಸ್ಟ್ಗೆ ರಾಹುಲ್ ಗಾಂಧಿ ನೀಡಿರುವ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸೂರ್ಯ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ದ್ವಂದ್ವ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ನ ಯೂ-ಟರ್ನ್ ರಾಜಕೀಯ:
ಕಳೆದ ವರ್ಷ ಭಾರತಕ್ಕೆ ಸ್ಟಾರ್ಲಿಂಕ್ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ಪ್ರಧಾನಿ ಮೋದಿಯವರಿಗೆ ಆಪ್ತರಾದ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ಮುಂದಿಟ್ಟುಕೊಂಡು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ ಈಗ ರಾಹುಲ್ ಗಾಂಧಿ ಅವರು ಸಂಪೂರ್ಣ ಯೂ-ಟರ್ನ್ ಹೊಡೆದಿದ್ದು, ಸ್ಟಾರ್ಲಿಂಕ್ ಪ್ರವೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ. ತಮ್ಮದೇ ಪಕ್ಷ ಕೆಲ ತಿಂಗಳ ಹಿಂದೆ ತಳೆದಿದ್ದ ನಿಲುವು ಹಾಗೂ ಭದ್ರತೆಯ ವಾದಗಳನ್ನು ಅವರು ಅನುಕೂಲಕ್ಕೆ ತಕ್ಕಂತೆ ಮರೆತುಬಿಟ್ಟಿದ್ದಾರೆ ಎಂದು ಸೂರ್ಯ ದೂರಿದ್ದಾರೆ.
ವಿದೇಶಿ ಉದ್ಯಮಿಗಳ ಪರ ಒಲವು – ಜೈಚಂದ್ ಹೋಲಿಕೆ:
ದೇಶದ ಆರ್ಥಿಕ ಹಿತಾಸಕ್ತಿಗಳಿಗಿಂತ ಮೋದಿ ವಿರೋಧವೇ ಕಾಂಗ್ರೆಸ್ಗೆ ಮುಖ್ಯವಾಗಿದೆ. ಭಾರತೀಯ ಉದ್ಯಮಿಗಳು ಪ್ರಧಾನಿಯವರಿಗೆ ಹತ್ತಿರವಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ, ಅವರನ್ನು ಎದುರಿಸಲು ವಿದೇಶಿ ಉದ್ಯಮಿಗಳನ್ನು ದೇಶಕ್ಕೆ ಸ್ವಾಗತಿಸಲು ರಾಹುಲ್ ಗಾಂಧಿ ಸಿದ್ಧರಾಗಿದ್ದಾರೆ. ಈ ನಡವಳಿಕೆಯು ಇತಿಹಾಸದ ‘ಜೈಚಂದ್’ ಪಾತ್ರವನ್ನು ನೆನಪಿಸುತ್ತದೆ. ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ನಮ್ಮವರೇ ಆದವರು ವಿದೇಶಿಯರೊಂದಿಗೆ ಕೈಜೋಡಿಸಿದ ಇತಿಹಾಸದ ತಪ್ಪು ನಿರ್ಧಾರಗಳಿಂದಾಗಿ ದೇಶವು ಶತಮಾನಗಳ ಕಾಲ ಗುಲಾಮಗಿರಿಯನ್ನು ಅನುಭವಿಸಬೇಕಾಯಿತು. ಈಗ ರಾಹುಲ್ ಗಾಂಧಿ ಅದೇ ಹಾದಿ ಹಿಡಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಪರಾಧೀನತೆಯ ಆತಂಕ:
ಕೇವಲ ರಾಜಕೀಯ ಲಾಭಕ್ಕಾಗಿ ಕೈಗೊಳ್ಳುವ ಇಂತಹ ನಿರ್ಧಾರಗಳು ಭವಿಷ್ಯದಲ್ಲಿ ದೇಶವು ತಾಂತ್ರಿಕ ಮತ್ತು ಆರ್ಥಿಕವಾಗಿ ವಿದೇಶಗಳ ಮೇಲೆ ಅವಲಂಬಿತವಾಗುವಂತೆ ಮಾಡುತ್ತದೆ. “ಕೇವಲ ಮೋದಿ ಅವರನ್ನು ವಿರೋಧಿಸುವ ನೆಪದಲ್ಲಿ ನೀವು ಭಾರತವನ್ನೇ ವಿರೋಧಿಸುತ್ತೀರಾ, ರಾಹುಲ್ ಗಾಂಧಿ ಅವರೇ?” ಎಂದು ಪ್ರಶ್ನಿಸಿರುವ ತೇಜಸ್ವಿ ಸೂರ್ಯ, ದೇಶಕ್ಕೆ ಇಂತಹ ವಿರೋಧ ಪಕ್ಷದ ನಾಯಕ ಸಿಕ್ಕಿರುವುದು ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.

