Sat. Jun 6th, 2026

ಸಚಿವ ಜಮೀರ್ ಹಾಗೂ ನನ್ನ ಮಧ್ಯೆ ಯಾವುದೇ ಗಲಾಟೆ ನಡೆದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

Share this with Friends

ನವದೆಹಲಿ: ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜೀನಾಮೆ ನೀಡಲಿದ್ದಾರೆ ಮತ್ತು ಸಚಿವ ಸಂಪುಟ ಸಭೆಯಲ್ಲಿ ನನ್ನೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂಬ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದರು.

ಸಚಿವ ಸಂಪುಟ ಸಭೆಯ ಕುರಿತು ವಿವರಣೆ ನೀಡಿದ ಶಿವಕುಮಾರ್ ಅವರು, ಅಂದು ತಾವು ಕುಟುಂಬದ ಕಾರ್ಯವಿದ್ದ ಕಾರಣ ಸಭೆ ಮುಗಿದ ತಕ್ಷಣ ಅಲ್ಲಿಂದ ನಿರ್ಗಮಿಸಿದ್ದಾಗಿ ತಿಳಿಸಿದರು. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವಂತೆ ಜಮೀರ್ ಅವರು ತಮ್ಮೊಂದಿಗೆ ಮಾತನಾಡಿಯೂ ಇಲ್ಲ ಅಥವಾ ಸಭೆಯಲ್ಲಿ ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಗಲಾಟೆಯ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ನಾಯಕರನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಕಾಂಗ್ರೆಸ್ ಪಕ್ಷವು ಇತಿಹಾಸದಿಂದಲೂ ಅಲ್ಪಸಂಖ್ಯಾತರಿಗೆ ಗರಿಷ್ಠ ರಕ್ಷಣೆ ಮತ್ತು ನೆರವು ನೀಡುತ್ತಾ ಬಂದಿದೆ. ಈ ಸಮುದಾಯದ ಹಿತವನ್ನು ಕಾಪಾಡುವಲ್ಲಿ ಕಾಂಗ್ರೆಸ್‌ಗೆ ಬೇರೆ ಯಾವ ಪಕ್ಷವೂ ಸಾಟಿಯಿಲ್ಲ. ದಾವಣಗೆರೆ ಕ್ಷೇತ್ರದ ಟಿಕೆಟ್ ಹಂಚಿಕೆಯಂತಹ ನಿರ್ಧಾರಗಳನ್ನು ಜಮೀರ್ ಅಹ್ಮದ್, ನಸೀರ್ ಅಹ್ಮದ್ ಹಾಗೂ ಜಬ್ಬಾರ್ ಅವರಂತಹ ಪ್ರಮುಖ ನಾಯಕರ ಒಪ್ಪಿಗೆ ಪಡೆದ ನಂತರವೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಂತಿಮವಾಗಿ, ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಉತ್ತರಿಸಿದ ಅವರು, ಪಕ್ಷದ ಹೈಕಮಾಂಡ್ ಕೆಲವು ಆಂತರಿಕ ವರದಿಗಳ ಆಧಾರದ ಮೇಲೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿಗಳು ಹಾಗೂ ಪಕ್ಷವು ಮುನ್ನಡೆಯುತ್ತಿದ್ದು, ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

 


Share this with Friends

Related Post