Sat. Jun 6th, 2026

ಮಹಿಳಾ ಮೀಸಲು ಮಸೂದೆ ವಿಫಲ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

Share this with Friends

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಹಿನ್ನಡೆಯಾಗಿರುವ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಇಂದು ಮತ್ತೆ ಮರುಕಳಿಸಿದೆ” ಎಂದು ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಇತಿಹಾಸ ಮರುಕಳಿಸಿದೆ:

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “1996ರಲ್ಲಿ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕ್ರಾಂತಿಕಾರಿ ಮಸೂದೆಯನ್ನು ಮಂಡಿಸಿದ್ದರು. ಅಂದು ಅದನ್ನು ವಿಫಲಗೊಳಿಸಿದ್ದ ಕಾಂಗ್ರೆಸ್, ಇಂದು 2026ರಲ್ಲೂ ಅದೇ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಮೂರು ದಶಕಗಳು ಕಳೆದರೂ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ ಬದಲಾಗಿಲ್ಲ” ಎಂದು ಟೀಕಿಸಿದರು.

ಮೋದಿ ಪ್ರಯತ್ನಕ್ಕೆ ಅಡ್ಡಿ:

“ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಮುಂದಾಗಿದ್ದರು. ಆದರೆ ವಿರೋಧ ಪಕ್ಷಗಳು ಒಟ್ಟಾಗಿ ಈ ಪ್ರಯತ್ನಕ್ಕೆ ತಡೆಯೊಡ್ಡಿವೆ. ಇದು ದೇಶದ ಮಾತೃಶಕ್ತಿಗೆ ಮಾಡಿದ ಅವಮಾನ,” ಎಂದು ಅವರು ಗುಡುಗಿದ್ದಾರೆ.

ಮಹಿಳೆಯರಿಗೆ ಭರವಸೆ:

ದೇಶದ ಮಹಿಳೆಯರು ಈ ಬೆಳವಣಿಗೆಯಿಂದ ಧೃತಿಗೆಡಬಾರದು ಎಂದು ಮನವಿ ಮಾಡಿದ ಸಚಿವರು, “ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಸಿಗಬೇಕಾದ ಅಗ್ರಮನ್ನಣೆ ಖಂಡಿತ ಸಿಗಲಿದೆ. 33% ಮೀಸಲಾತಿಯ ಗುರಿಯನ್ನು ನಾವು ಸಾಧಿಸಿಯೇ ತೀರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಸೂದೆ ಸೋಲಿಗೆ ಕಾರಣರಾದವರಿಗೆ ದೇಶದ ನಾರಿಶಕ್ತಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

 


Share this with Friends

Related Post