Sat. Jun 6th, 2026

ಲಯನ್ ಸಫಾರಿಯಲ್ಲಿ ನೀರಾನೆ ದಾಳಿಯಿಂದ ಪಶುವೈದ್ಯೆ ಸಾವು; ಸಮಗ್ರ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

Share this with Friends

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ನೀರಾನೆ ದಾಳಿಯಿಂದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಶುಕ್ರವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವರು, ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದರು. ಯುವ ವೈದ್ಯೆಯ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ ಅವರು, ಈ ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘಟನೆಯ ಹಿನ್ನೆಲೆ:

ಅಸ್ವಸ್ಥಗೊಂಡಿದ್ದ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಸಂದರ್ಭದಲ್ಲಿ ಪ್ರಾಣಿ ಏಕಾಏಕಿ ದಾಳಿ ನಡೆಸಿದ್ದರಿಂದ ಡಾ. ಸಮೀಕ್ಷಾ ಅವರು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಸಚಿವರ ಪ್ರಮುಖ ನಿರ್ದೇಶನಗಳು:

ಏಳು ದಿನಗಳಲ್ಲಿ ವರದಿ: ಘಟನೆಯ ಕುರಿತು ಪಶುವೈದ್ಯಕೀಯ ತಜ್ಞರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವು ಸಮಗ್ರ ತನಿಖೆ ನಡೆಸಿ, ಒಂದು ವಾರದೊಳಗೆ ವರದಿ ನೀಡಬೇಕು.

SOP ಉಲ್ಲಂಘನೆಯೇ?: ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ಪಾಲಿಸಬೇಕಾದ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ಗಳನ್ನು (SOP) ಅನುಸರಿಸಲಾಗಿದೆಯೇ? ರಾತ್ರಿ ಸಮಯದಲ್ಲಿ ಚಿಕಿತ್ಸೆ ನೀಡುವಾಗ ಸುರಕ್ಷತಾ ಕ್ರಮಗಳ ಕೊರತೆ ಇತ್ತೇ? ಎಂಬ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.

ಪರಿಹಾರ ವಿತರಣೆ: ಮೃತ ವೈದ್ಯೆಯ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ತಕ್ಷಣವೇ ಗರಿಷ್ಠ ಮೊತ್ತದ ಪರಿಹಾರ ಧನವನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

“ವನ್ಯಜೀವಿಗಳ ಚಿಕಿತ್ಸೆಯ ಸಂದರ್ಭದಲ್ಲಿ ಸಿಬ್ಬಂದಿಯ ಸುರಕ್ಷತೆ ಅತ್ಯಂತ ಮುಖ್ಯ. ಇಂತಹ ಘಟನೆಗಳು ಮರುಕಳಿಸದಂತೆ ಮೃಗಾಲಯ ಹಾಗೂ ಸಫಾರಿಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

 


Share this with Friends

Related Post