ಬೆಂಗಳೂರು: ದೇಶಾದ್ಯಂತ ಎಲ್‌ಪಿಜಿ ಅನಿಲದ ತೀವ್ರ ಅಭಾವವಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಅವರು, “ರಾಜ್ಯ ಬಿಜೆಪಿ ಕಚೇರಿಯಲ್ಲೇ ಗ್ಯಾಸ್ ಇಲ್ಲದೆ ಸೌದೆ ಒಲೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ” ಎಂದು ವೀಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.
ಸಚಿವರ ಪ್ರಮುಖ ಆರೋಪಗಳು:
ಆಟೋ ಚಾಲಕರ ಸಂಕಷ್ಟ: ಗ್ಯಾಸ್‌ಗಾಗಿ ಆಟೋ ಚಾಲಕರು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುವಂತಾಗಿದೆ. ಹೋಟೆಲ್‌ಗಳಲ್ಲಿ ಮೆನು ಕಡಿತಗೊಳಿಸಿ, ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ.
ಕೇಂದ್ರದ ನಿರ್ಲಕ್ಷ್ಯ: 14.2 ಕೆಜಿ ಸಿಲಿಂಡರ್‌ನಲ್ಲಿ ಕೇವಲ 10 ಕೆಜಿ ಅನಿಲ ತುಂಬಲು ಮುಂದಾಗಿರುವ ಕೇಂದ್ರದ ಕ್ರಮ ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಮಾಡಿದಂತಿದೆ.
ಸಂಸದರ ಮೌನ: ರಾಜ್ಯದ 19 ಎನ್‌ಡಿಎ ಸಂಸದರು ಈ ಗಂಭೀರ ಸಮಸ್ಯೆಯ ಬಗ್ಗೆ ಬಾಯಿ ಬಿಡಲು ಹೆದರುತ್ತಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರು ಸರ್ವಪಕ್ಷ ಸಭೆ ಕರೆಯದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಚಿವರು ಟೀಕಿಸಿದ್ದಾರೆ.
“ಬಿಜೆಪಿ ಕಚೇರಿಯಲ್ಲಿ ಉರಿಯುತ್ತಿರುವ ಸೌದೆ ಒಲೆಯೇ ಎಲ್‌ಪಿಜಿ ಕೊರತೆಗೆ ಸಾಕ್ಷಿ ನುಡಿಯುತ್ತಿದೆ. ಇನ್ನೆಷ್ಟು ದಿನ ಈ ಸತ್ಯವನ್ನು ಮುಚ್ಚಿಡುತ್ತೀರಿ? ಕೇಂದ್ರವನ್ನು ಅನಗತ್ಯವಾಗಿ ಹೊಗಳುವವರು ಇದಕ್ಕೆ ಉತ್ತರಿಸಲಿ” ಎಂದು ಅವರು ಸವಾಲು ಹಾಕಿದ್ದಾರೆ.

