Fri. Oct 9th, 2026

72ನೇ ವನ್ಯಜೀವಿ ಸಪ್ತಾಹದ ಸಮಾರೋಪ: ಮೂರು ಪ್ರಮುಖ ಸಾಕ್ಷ್ಯಚಿತ್ರಗಳ ಬಿಡುಗಡೆ

Share this with Friends

ಬೆಂಗಳೂರು: 2026ನೇ ಸಾಲಿನ 72ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ವನ್ಯಜೀವಿಗಳ ಸಂರಕ್ಷಣೆ, ಪರಿಸರ ಸಮತೋಲನದ ರಕ್ಷಣೆ ಹಾಗೂ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಹಬಾಳ್ವೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಆಕರ್ಷಕ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಎ.ಎಂ.ಸಿ. ಕಾಲೇಜಿನ ಅಧ್ಯಕ್ಷರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂರು ಸಾಕ್ಷ್ಯಚಿತ್ರಗಳ ಲೋಕಾರ್ಪಣೆ:

ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯ ಭಾಗವಾಗಿ ಮಾನ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಮೂರು ಪ್ರಮುಖ ಸಾಕ್ಷ್ಯಚಿತ್ರಗಳನ್ನು ಇದೇ ವೇಳೆ ಬಿಡುಗಡೆಗೊಳಿಸಿದರು:

‘Crossing Paths’: ಸಂಯುಕ್ತ ಹೊರನಾಡು ನಿರ್ದೇಶನದ ಈ ಸಾಕ್ಷ್ಯಚಿತ್ರವು, ಸಮುದಾಯ ಆಧಾರಿತ ಸಂರಕ್ಷಣಾ ಕ್ರಮಗಳು ಮಾನವ ಮತ್ತು ವನ್ಯಜೀವಿಗಳ ಸಹಬಾಳ್ವೆಗೆ ಹೇಗೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

‘Lungs of Bengaluru’: ಹೇಮಂತ್ ನಿರ್ದೇಶನದ ಈ ಚಿತ್ರವು, ಸಿಲಿಕಾನ್ ಸಿಟಿ ಬೆಂಗಳೂರಿನ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯವು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪರಿಚಯಿಸುತ್ತದೆ.

‘ಆನೆ ಕಾರ್ಯಪಡೆ (ETF)’: ವಿರಮಾಯಾ ಫಿಲಂಸ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರವು, ಕಾಡು ಮತ್ತು ನಾಡಿನ ನಡುವಿನ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಆನೆ ಕಾರ್ಯಪಡೆ ಸಿಬ್ಬಂದಿಯ ನೈಜ ಹಾಗೂ ರೋಮಾಂಚನಕಾರಿ ಅನುಭವಗಳನ್ನು ದಾಖಲಿಸಿದೆ.

ಪ್ಯಾನಲ್ ಚರ್ಚೆ ಮತ್ತು ಬಹುಮಾನ ವಿತರಣೆ:

ಸಾಕ್ಷ್ಯಚಿತ್ರಗಳ ಬಿಡುಗಡೆಯ ನಂತರ, ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಜ್ವಲಂತ ವಿಷಯಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ಪ್ಯಾನಲ್ ಚರ್ಚೆಗಳು (ಗೋಷ್ಠಿಗಳು) ನಡೆದವು. ಇದೇ ವೇಳೆ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಕರ್ಷಕ ಪಾರಿತೋಷಕ (Trophy)ಗಳನ್ನು ವಿತರಿಸಿ ಗೌರವಿಸಲಾಯಿತು.

 

 


Share this with Friends

Related Post