Fri. Mar 6th, 2026

ಇನ್ಮುಂದೆ ಆರೋಗ್ಯ ಸಿಬ್ಬಂದಿ ವೇತನ ವಿಳಂಬವಾಗಲ್ಲ: ದಿನೇಶ್ ಗುಂಡೂರಾವ್ ಭರವಸೆ

Share this with Friends

ಬೆಂಗಳೂರು: ಇನ್ನುಂದೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿಗೆ ಕೇಂದ್ರದಿಂದ ಅನುದಾನ ಬರುವುದನ್ನು ಕಾಯದೆ ರಾಜ್ಯ ಸರ್ಕಾರವೇ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿಗೆ ಎರಡು ತಿಂಗಳ ವೇತನ ವಿಳಂಬ ಕುರಿತು ಸ್ಪಷ್ಟೀಕರಣ ನೀಡಿದ ಸಚಿವರು, ಕೇಂದ್ರ ಸರ್ಕಾರವು 2025–26ರ ಹಣಕಾಸು ವರ್ಷದ ಮಧ್ಯದಲ್ಲಿ SNA-SPARSH ಪಾವತಿ ವ್ಯವಸ್ಥೆಯನ್ನು ನವೀಕರಿಸುವ ನೀತಿಯನ್ನು ಜಾರಿಗೆ ತಂದಿದೆ. ಈ ನವೀಕರಣದ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎರಡೂ ಕಡೆ  ಪಾವತಿ ಪ್ರಕ್ರಿಯೆ ಹಾಗೂ ತಾಂತ್ರಿಕ ವ್ಯವಸ್ಥೆಗಳಲ್ಲಿ ಬದಲಾವಣೆ ಮತ್ತು ಮರುಹೊಂದಾಣಿಕೆ  ನಡೆಯಬೇಕಾಯಿತು ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿಗೆ ಎರಡು ತಿಂಗಳುಗಳ ಕಾಲ ನಿರಂತರವಾಗಿ ವೇತನ ಪಾವತಿ ವಿಳಂಬವಾಯಿತು ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯಡಿಯಲ್ಲಿ ಕೇಂದ್ರ ಸರ್ಕಾರದ ಪಾಲು  ಬಂದ ನಂತರವಷ್ಟೇ ರಾಜ್ಯ ಸರ್ಕಾರದಿಂದ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕೇಂದ್ರದಿಂದ ಅನುದಾನ ನೀಡಿಕೆಯಲ್ಲಿ ಉಂಟಾದ ವಿಳಂಬ ಮತ್ತು ಹೊಸ ವ್ಯವಸ್ಥೆಯ ಕಾರಣದಿಂದ NHM ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವುದಕ್ಕೆ ಅಡ್ಡಿಯಾಗಿದೆ. ವೇತನ ಪಾವತಿಗಾಗಿ 8ನೇ ಜನವರಿ 2026ರಂದು ಕೇಂದ್ರ ಸರ್ಕಾರವು ₹175.75  ಕೋಟಿ ಬಿಡುಗಡೆ ಮಾಡಿದ್ದು ಈ ಮೊತ್ತವನ್ನು ಈಗ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೂಲಕ ನಮ್ಮೆಲ್ಲ ಆರೋಗ್ಯ ಸಿಬ್ಬಂದಿಗೆ ಭರವಸೆ ನೀಡುತ್ತಿದ್ದೇನೆ. ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ಅನುದಾನ ಯಾವಾಗ ಬರುತ್ತದೆ ಎಂಬುದನ್ನು ಲೆಕ್ಕಿಸದೆ, ನಮ್ಮ ಸರ್ಕಾರ‌ ಆರೋಗ್ಯ ಸಿಬ್ಬಂದಿಯ ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದಕ್ಕೆ ಮೊದಲ ಆದ್ಯತೆ ನೀಡಲಿದ್ದೇವೆ ಜೊತೆಗೆ ವೇತನ ಪಾವತಿ ಸುಗಮವಾಗುವಂತೆ ಮಾಡಲು ಹಾಗೂ ಇಂತಹ ವಿಳಂಬಗಳು ಮರುಕಳಿಸದಂತೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಪಾವತಿ ವ್ಯವಸ್ಥೆಯನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಮಾಡಲಾಗುತ್ತದೆ ಎಂದು ಅಭಯ ನೀಡಿದ್ದಾರೆ.


Share this with Friends

Related Post