Fri. Mar 6th, 2026

ಮಡಿವಾಳ ಸಮುದಾಯದ ಗುರು ಪೀಠಕ್ಕೆ ಬೆಂಗಳೂರಿನಲ್ಲಿ ಒಂದು ಎಕರೆ ಜಾಗ: ಶಿವರಾಜ್ ತಂಗಡಗಿ

Share this with Friends

ಬೆಂಗಳೂರು:ಮಡಿವಾಳ ಸಮುದಾಯದ ಗುರು ಪೀಠಕ್ಕೆ ಒಂದು ಎಕರೆ ನೀಡಲು ತೀರ್ಮಾನಿಸಲಾಗಿದ್ದು, ಒತ್ತುವರಿಯಾಗಿರುವ ಕೆಂಗೇರಿ ಗುರುಪೀಠದ ಮೂರು ಎಕರೆ ಜಾಗವನ್ನು ಗುರು ಪೀಠಕ್ಕೆ ಕೊಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ  ಭರವಸೆ ನೀಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಸಮುದಾಯದ ಎಲ್ಲಾ ಮಠಗಳಿಗೆ ಬೆಂಗಳೂರಿನ ಸುತ್ತಮುತ್ತ ಒಂದೆರೆಡು ಎಕರೆ ಜಾಗ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮಡಿವಾಳ ಸಮುದಾಯದ ಗುರು ಪೀಠಕ್ಕೆ ಒಂದು ಎಕರೆ ನೀಡಲು ತೀರ್ಮಾನಿಸಲಾಗಿದೆ.ಇನ್ನು ಕಳೆದ ಸಾಲಿನ ಬಜೆಟ್ ನಲ್ಲಿ ಮಡಿವಾಳ ಅಭಿವೃದ್ಧಿ ನಿಗಮಕ್ಕೆ ರೂ. 34 ಕೋಟಿ ಅನುದಾನ ನೀಡಲಾಗಿದೆ.‌ ಅದಕ್ಕಿಂತ ಹಿಂದೆ ರೂ.15 ಕೋಟಿ ನೀಡಲಾಗಿತ್ತು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದ್ದಲ್ಲಿದ್ದ ವೇಳೆ ನಿಗಮದಿಂದ ಒಂದೇ ಒಂದು ಯೋಜನೆಯನ್ನು ನೀಡಿಲ್ಲ ಎಂದು ತಿಳಿಸಿದರು.

ಕೆಂಗೇರಿಯಲ್ಲಿರುವ ಗುರುಪೀಠದ ಮೂರು ಎಕರೆಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮುಖಂಡರು ಕಾರ್ಯಕ್ರಮದಲ್ಲಿ ಸಚಿವರ ಗಮನಕ್ಕೆ ತಂದರು.‌‌ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು.‌ ಒತ್ತುವರಿಯಾಗಿರುವ ಜಾಗವನ್ನು ಗುರು ಪೀಠಕ್ಕೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಢೋಂಗಿತನ‌ಕ್ಕೆ ವಿರೋಧ:

ಮಡಿವಾಳ‌ ಮಾಚಿದೇವರು ಸಮಾಜದಲ್ಲಿನ ತಾರತಮ್ಯ ಮತ್ತು ಢೋಂಗಿತನವನ್ನು  ವಿರೋಧಿಸುವ‌ ಮೂಲಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಇಂತಹ ವೈಚಾರಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕು.‌ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ಮಾಚಿದೇವರು ಹನ್ನೆರಡನೆಯ ಶತಮಾನದ ಒಬ್ಬ ಶ್ರೇಷ್ಠ ಶರಣರು. ಮನುಷ್ಯನಿಗೆ ಅಚ್ಚುಕಟ್ಟುತನ, ಶುಚಿ ಅತ್ಯಂತ ಮುಖ್ಯವಾದದ್ದು. ಅದು ಮಾನಸಿಕ ಶುಚಿತ್ವವೂ ಹೌದು, ದೈಹಿಕ ಶುಚಿತ್ವವೂ ಹೌದು, ಪರಿಸರ ಶುಚಿತ್ವವೂ ಹೌದು ಹಾಗೂ ಸಾಮಾಜಿಕ ಬಾಂಧವ್ಯಗಳ ಶುಚಿತ್ವವೂ ಹೌದು ಎಂದು‌‌ ಹೇಳಿದ್ದರು ಎಂದು‌ ನೆನೆದರು.‌

ಕಾಯಕ ಮಾಡುತ್ತಲೇ ವಚನಗಳನ್ನು ರಚಿಸಿ ಹಾಡುವುದು, ಶರಣ ಸಂಸ್ಕೃತಿಯನ್ನು ಪಾಲಿಸುವುದು ಶರಣರ ಧರ್ಮ. ವೀರವ್ಯಕ್ತಿಯಾಗಿ ತೋರಿಬರುವ ಮಡಿವಾಳ ಮಾಚಯ್ಯನವರು ಸದಾಕಾಲಕ್ಕೂ ಸರ್ವರಿಗೂ ಮಾರ್ಗದರ್ಶಕರಾಗಿದ್ದಾರೆ. ಬಸವಣ್ಣನವರ ಆಶಯದ ಸಮಸಮಾಜದ ಸಾಕಾರತೆಗಾಗಿ, ಅವರ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಕ್ರಾಂತಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.


Share this with Friends

Related Post