Fri. Mar 6th, 2026

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಮಸ್ಯೆ ಅಂತ್ಯ: ವೈದ್ಯಾಧಿಕಾರಿಗಳಿಗೆ 6 ತಿಂಗಳ ಅಲ್ಟ್ರಾಸೌಂಡ್ ತರಬೇತಿ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ನೀಗಿಸಲು ಮತ್ತು ಗರ್ಭಿಣಿಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಬಿಬಿಎಸ್ (MBBS) ವೈದ್ಯಾಧಿಕಾರಿಗಳಿಗೆ ಆರು ತಿಂಗಳ ವಿಶೇಷ ಅಲ್ಟ್ರಾಸೋನೊಗ್ರಫಿ (Ultrasonography) ತರಬೇತಿ ನೀಡಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಚಿವರು, ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆ, ಮಂಗಳೂರಿನ ಲೇಡಿ ಘೋಷನ್ ಮತ್ತು ವೆನ್ಲಾಕ್ ಆಸ್ಪತ್ರೆ, ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಚಿಕ್ಕಬಳ್ಳಾಪುರ, ಧಾರವಾಡ, ತುಮಕೂರು, ವಿಜಯಪುರ, ಬಳ್ಳಾರಿ, ಕೋಲಾರ ಮತ್ತು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ತರಬೇತಿ ಲಭ್ಯವಿರಲಿದೆ. ಒಟ್ಟು 23 ಅಧ್ಯಾಪಕರ ಮಾರ್ಗದರ್ಶನದಲ್ಲಿ 69 ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲು ಗುರಿ ಹೊಂದಲಾಗಿದ್ದು, ಅಧ್ಯಾಪಕ ಮತ್ತು ವಿದ್ಯಾರ್ಥಿ ಅನುಪಾತವನ್ನು 1:3 ರಂತೆ ನಿಗದಿಪಡಿಸಲಾಗಿದೆ. ಈ ತರಬೇತಿಗೆ ಕೇವಲ ಇಲಾಖೆಯಲ್ಲಿ ಸೇವೆಯಲ್ಲಿರುವ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯನ್ನು ಬಂಧಪತ್ರ ಕೋಶದ (Bond Enforcement Cell) ಸಮನ್ವಯದೊಂದಿಗೆ ನಡೆಸಲಾಗುತ್ತದೆ. ತರಬೇತಿ ಪಡೆದ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅಲ್ಟ್ರಾಸೋನೊಗ್ರಫಿ ಸೇವೆಗಳನ್ನು ನೀಡಬೇಕೆಂದು ಷರತ್ತು ವಿಧಿಸಲಾಗಿದೆ.

ಪರ್ಯಾಯ ವ್ಯವಸ್ಥೆ

ತರಬೇತಿಗೆ ನಿಯೋಜನೆಗೊಳ್ಳುವ ವೈದ್ಯರ ಅನುಪಸ್ಥಿತಿಯಲ್ಲಿ ಸಾರ್ವಜನಿಕ ಸೇವೆಗೆ ತೊಂದರೆಯಾಗದಂತೆ, ಆಯಾ ಸ್ಥಾನಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ವೈದ್ಯರನ್ನು ನೇಮಿಸಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ಸೂಚಿಸಲಾಗಿದೆ ಎಂದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು (SIHFW) ಈ ಸಂಪೂರ್ಣ ಯೋಜನೆಯ ಉಸ್ತುವಾರಿ ವಹಿಸಲಿದೆ.”ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಪ್ರಸವಪೂರ್ವ ಸೇವೆಗಳನ್ನು ಬಲಪಡಿಸುವುದು ನಮ್ಮ ಉದ್ದೇಶ. ತರಬೇತಿ ಪಡೆದ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲೇ ಸೇವೆ ನೀಡುವುದರಿಂದ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.


Share this with Friends

Related Post