Fri. Mar 6th, 2026

ಶಿವಮೊಗ್ಗದ ವಿದ್ಯಾರ್ಥಿ ಹತ್ಯೆ ಪ್ರಕರಣ:ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಗೆ ಸಿಎಂ ಸೂಚನೆ

Share this with Friends

ಶಿವಮೊಗ್ಗ: ನಗರದ ಸಮೀಪದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯ ಮೇಲೆ ನಡೆದ ಪಾಶವಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ, “ಕೊಲೆಗೈದವರು ಯಾರೇ ಆಗಿರಲಿ, ಅವರನ್ನು ಕಾನೂನಿನ ಮೂಲಕ ಹೆಡೆಮುರಿ ಕಟ್ಟಿ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ನೂರು ಬಾರಿ ಯೋಚಿಸಬೇಕು – ಅಂತಹ ಭಯ ಹುಟ್ಟಿಸುವ ವಾತಾವರಣ ನಿರ್ಮಿಸಿ” ಎಂದು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಈಗಾಗಲೇ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವ ವಾಗ್ದಾನ ನೀಡಿದ್ದಾರೆ.

ಬಾಲಾಪರಾಧಗಳ ಬಗ್ಗೆ ಆತಂಕ:

ಕೊಲೆಯಲ್ಲಿ ಭಾಗಿಯಾದವರು ಅತಿ ಚಿಕ್ಕ ವಯಸ್ಸಿನವರು ಎಂದು ತಿಳಿದು ಮುಖ್ಯಮಂತ್ರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. “ಚೆನ್ನಾಗಿ ಓದಿ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ದುರದೃಷ್ಟಕರ. ಬಾಲ್ಯದಲ್ಲೇ ದ್ವೇಷ ಮತ್ತು ಹಿಂಸೆಯ ಮನಸ್ಥಿತಿ ಬೆಳೆಸಿಕೊಳ್ಳುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪೋಷಕರು ಹಾಗೂ ಶಾಲೆಗಳಿಗೆ ಎಚ್ಚರಿಕೆ:

ಮಕ್ಕಳು ಹಾದಿ ತಪ್ಪದಂತೆ ಪೋಷಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಡಬೇಕು. ಶಾಲಾ ಆವರಣದ ಸುತ್ತಮುತ್ತ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಆಡಳಿತ ಮಂಡಳಿಗಳು ಜಾಗರೂಕತೆ ವಹಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣ ಪೊಲೀಸರ ನೆರವು ಪಡೆಯಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಶಾಂತಿ ಕಾಪಾಡಲು ಮನವಿ:

ಸಾರ್ವಜನಿಕರು ಯಾವುದೇ ರೀತಿಯ ಪ್ರಚೋದನೆಗಳಿಗೆ ಕಿವಿಗೊಡಬಾರದು. ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಶಾಂತಿ ಭಂಗ ಉಂಟುಮಾಡುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಸಿದ್ದಾರೆ.


Share this with Friends

Related Post