ಬೆಂಗಳೂರು: ಸದಾ ಲಾಠಿ, ವಯರ್‌ಲೆಸ್ ಸೆಟ್, ಫೈಲ್‌ಗಳು ಮತ್ತು ಜನರ ದೂರುಗಳ ನಡುವೆ ಗಂಭೀರವಾಗಿ ಓಡಾಡುವ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಬ್ಬದ ವಾತಾವರಣ. ಗಂಭೀರ ಮುಖಭಾವದ ಮಹಿಳಾ ಪೊಲೀಸರ ಮುಖದಲ್ಲಿಂದು ಮಂದಹಾಸದ ಅಲೆ. ಕಾರಣ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶಿಷ್ಟ ಸಂಭ್ರಮ.
ನಗರ ಪೊಲೀಸ್ ಇಲಾಖೆ ಹಾಗೂ ‘ಪರಿಹಾರ್’ ಸಂಘಟನೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮ ಕೇವಲ ಭಾಷಣಕ್ಕೆ ಸೀಮಿತವಾಗಲಿಲ್ಲ. ಬದಲಾಗಿ, ಕರ್ತವ್ಯದ ಒತ್ತಡವನ್ನು ಬದಿಗೊತ್ತಿ ಮಹಿಳಾ ಸಿಬ್ಬಂದಿಗಳು ಸಂಗೀತದ ಮಾಂತ್ರಿಕ ಲೋಕದಲ್ಲಿ ಮಿಂದೆದ್ದರು. ವಿಶೇಷವಾಗಿ ಆಯೋಜಿಸಲಾಗಿದ್ದ ‘ಡ್ರಮ್ ಮೇಳ’ದಲ್ಲಿ (Drum Jam) ಡ್ರಮ್ ಬಾರಿಸುವ ಮೂಲಕ ಲಯಬದ್ಧವಾಗಿ ಹೆಜ್ಜೆ ಹಾಕಿದ ಮಹಿಳಾ ಸಿಬ್ಬಂದಿಗಳು, ತಮ್ಮೊಳಗಿನ ಕಲಾಪ್ರತಿಭೆಯನ್ನು ಹೊರಹಾಕಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರ ರಕ್ಷಣೆಗಾಗಿ ಶ್ರಮಿಸುವ ಈ ‘ಅಬಲೆ’ಯಲ್ಲದ ‘ಸಬಲೆ’ಯರಿಗೆ ಇದು ನಿಜಕ್ಕೂ ಉಲ್ಲಾಸದ ಕ್ಷಣವಾಗಿತ್ತು. ಹಾಡು, ಹರಟೆ ಮತ್ತು ಸಂವಾದಗಳ ಮೂಲಕ ಮಹಿಳಾ ಸಿಬ್ಬಂದಿಗಳು ಪರಸ್ಪರ ಬೆರೆತರು. “ಮನೆಯ ಜವಾಬ್ದಾರಿ ಮತ್ತು ಇಲಾಖೆಯ ಕರ್ತವ್ಯದ ನಡುವೆ ನಮಗಾಗಿ ಸಿಕ್ಕ ಈ ಒಂದು ಕ್ಷಣ ತುಂಬಾ ಅಮೂಲ್ಯವಾದುದು” ಎಂದು ಸಿಬ್ಬಂದಿಯೊಬ್ಬರು ಸಂತಸ ಹಂಚಿಕೊಂಡರು.
ಮಹಿಳಾ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗದೆ, ಅವರ ಅಪ್ರತಿಮ ಸೇವೆಗೆ ಸಲ್ಲಿಸಿದ ಹೃತ್ಪೂರ್ವಕ ಗೌರವವಾಗಿ ಗಮನ ಸೆಳೆಯಿತು. ಬೆಂಗಳೂರು ನಗರ ಪೊಲೀಸರ ಈ ಸಣ್ಣ ಪ್ರಯತ್ನ, ಮಹಿಳಾ ಸಿಬ್ಬಂದಿಗಳ ಪಾಲಿಗೆ ದೊಡ್ಡ ಮಟ್ಟದ ಸ್ಫೂರ್ತಿಯನ್ನು ತುಂಬಿತು.

