ಬೆಂಗಳೂರು:ನಗರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಅಸ್ತಿತ್ವಕ್ಕೆ ಬಂದ ನಂತರ, ನೂತನವಾಗಿ ರಚನೆಯಾಗಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆ (BCCC) ಇಂದು ತನ್ನ ಮೊದಲ ಐತಿಹಾಸಿಕ ಬಜೆಟ್ ಮಂಡಿಸಿದೆ. ಒಟ್ಟು ₹3,426.60 ಕೋಟಿ ವೆಚ್ಚದ ಈ ಆಯವ್ಯಯವು ಕೇಂದ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ.
ನಗರದ ಐತಿಹಾಸಿಕ ಸರ್. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಚೊಚ್ಚಲ ಬಜೆಟ್ ಮಂಡನೆಯಾಯಿತು. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಡಳಿತಗಾರ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಆಯುಕ್ತ ರಾಜೇಂದ್ರ ಚೋಳನ್ ಅವರ ಉಪಸ್ಥಿತಿಯಲ್ಲಿ ಪಾಲಿಕೆಯ ಹಣಕಾಸು ವಿಭಾಗದ ಉಪ ನಿಯಂತ್ರಕರಾದ ವಿಜಯಲಕ್ಷ್ಮಿ ಅವರು 2026-27ನೇ ಸಾಲಿನ ಆಯವ್ಯಯ ಅಂದಾಜನ್ನು ಪ್ರಸ್ತುತಪಡಿಸಿದರು
ಆದಾಯ ಮತ್ತು ಉಳಿತಾಯದ ಲೆಕ್ಕಾಚಾರ:
ಪಾಲಿಕೆಯು ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು ₹3,427.34 ಕೋಟಿ ಆದಾಯವನ್ನು ನಿರೀಕ್ಷಿಸಿದ್ದು, ₹3,426.60 ಕೋಟಿ ವೆಚ್ಚದ ಗುರಿ ಹೊಂದಿದೆ. ಆ ಮೂಲಕ ಇದು ಸುಮಾರು ₹78.65 ಲಕ್ಷದಷ್ಟು ಉಳಿತಾಯ ಬಜೆಟ್ ಆಗಿ ಹೊರಹೊಮ್ಮಿದೆ. ಹಳೆಯ ಬಿಬಿಎಂಪಿ ವ್ಯವಸ್ಥೆಯಿಂದ ಬೇರ್ಪಟ್ಟ ನಂತರ ಮಂಡನೆಯಾದ ಮೊದಲ ಬಜೆಟ್ ಇದಾಗಿರುವುದರಿಂದ ಎಲ್ಲರ ಕುತೂಹಲ ಕೆರಳಿಸಿತ್ತು.
ಬಜೆಟ್‌ನ ಮುಖ್ಯಾಂಶಗಳು:
ಆರೋಗ್ಯ ಕ್ರಾಂತಿ – ‘ಬೈಕ್ ಆಂಬ್ಯುಲೆನ್ಸ್’: ಕೇಂದ್ರ ಬೆಂಗಳೂರಿನ ದಟ್ಟಣೆಯ ರಸ್ತೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ತಲುಪುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ಪ್ರಾಣಾಪಾಯದಲ್ಲಿರುವವರಿಗೆ ತಕ್ಷಣ ನೆರವು ನೀಡಲು ‘ಬೈಕ್ ಆಂಬ್ಯುಲೆನ್ಸ್’ ಯೋಜನೆಯನ್ನು ಘೋಷಿಸಲಾಗಿದೆ.
ರಸ್ತೆ ಸುರಕ್ಷತೆ ಮತ್ತು ಗುಂಡಿ ಮುಕ್ತ ನಗರ: ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿರುವ ಸಣ್ಣ ಮತ್ತು ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಗುಂಡಿ ಮುಕ್ತ (Pothole-free) ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿಗಳ ಸುರಕ್ಷತೆಗಾಗಿ ಸುಸಜ್ಜಿತ ಫುಟ್‌ಪಾತ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಅಂತರಾಷ್ಟ್ರೀಯ ಮಟ್ಟದ ‘ಬಿಸಿನೆಸ್ ಕಾರಿಡಾರ್‘: ನಗರದ ಹೃದಯಭಾಗದಲ್ಲಿರುವ ಆಯ್ದ ವ್ಯಾಪಾರ ಕೇಂದ್ರಗಳನ್ನು ಜಾಗತಿಕ ಮಟ್ಟದ ಸೌಲಭ್ಯಗಳೊಂದಿಗೆ ‘ಬಿಸಿನೆಸ್ ಕಾರಿಡಾರ್’ ಆಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟಿಗೆ ಹೆಚ್ಚಿನ ಬಲ ನೀಡಲಿದೆ.
ಪಾರಂಪರಿಕ ತಾಣಗಳ ಸಂರಕ್ಷಣೆ: ಬೆಂಗಳೂರಿನ ಐತಿಹಾಸಿಕ ಗುರುತುಗಳನ್ನು ಉಳಿಸಲು ಪಾರಂಪರಿಕ ಕಟ್ಟಡಗಳ ನವೀಕರಣ ಮತ್ತು ಸಂರಕ್ಷಣೆಗೆ ವಿಶೇಷ ಅನುದಾನ ಮೀಸಲಿಡಲಾಗಿದೆ.
ಸಾಮಾಜಿಕ ಕಳಕಳಿ: ನಿರ್ಗತಿಕರು ಮತ್ತು ವೃದ್ಧರಿಗಾಗಿ ಸುಸಜ್ಜಿತ ವೃದ್ಧಾಶ್ರಮಗಳ ಸ್ಥಾಪನೆ ಹಾಗೂ ಸ್ಲಂ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
ಹೊಸ ಆಡಳಿತದ ಸವಾಲು:
ಹಳೆಯ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಿದ ನಂತರ ಕೇಂದ್ರ ಪಾಲಿಕೆಯು ಸ್ವತಂತ್ರವಾಗಿ ಮಂಡಿಸಿರುವ ಮೊದಲ ಬಜೆಟ್ ಇದಾಗಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಸ್ಥಳೀಯ ಅಗತ್ಯಗಳಿಗಾಗಿ ಪರಿಣಾಮಕಾರಿಯಾಗಿ ಬಳಸುವ ಗುರಿಯನ್ನು ಹೊಂದಿದೆ. ಇದೇ ವೇಳೆ ಬೆಂಗಳೂರು ಪೂರ್ವ ಪಾಲಿಕೆಯು ಸಹ ₹3,889 ಕೋಟಿ ಗಾತ್ರದ ಬಜೆಟ್ ಮಂಡಿಸಿರುವುದು ಗಮನಾರ್ಹ.

