Sat. Jun 6th, 2026

ಏಪ್ರಿಲ್ 1 ರಿಂದ ‘ರಾಷ್ಟ್ರೀಯ ಜನಗಣತಿ-2027’ ಆರಂಭ: ನಾಗರಿಕರಿಗೆ ಸ್ವಯಂ-ಗಣತಿಗೆ ಅವಕಾಶ

Share this with Friends

ಬೆಂಗಳೂರು: ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ‘ರಾಷ್ಟ್ರೀಯ ಜನಗಣತಿ-2027’ ಪ್ರಕ್ರಿಯೆಯು ಏಪ್ರಿಲ್ 1 ರಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಈ ಬಾರಿ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೊದಲ 15 ದಿನಗಳ ಕಾಲ ‘ಸ್ವಯಂ-ಗಣತಿ’ಗೆ (Self-Enumeration) ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸ್ವಯಂ-ಗಣತಿ ಹೇಗೆ?

ಏಪ್ರಿಲ್ 1 ರಿಂದ 15ರ ವರೆಗೆ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಕುಟುಂಬದ ವಿವರಗಳನ್ನು ವೆಬ್ ಪೋರ್ಟಲ್‌ನಲ್ಲಿ ದಾಖಲಿಸಬಹುದು. ಇದಕ್ಕಾಗಿ census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆ ಹಾಗೂ ಒಟಿಪಿ (OTP) ಮೂಲಕ ಲಾಗಿನ್ ಆಗಿ ಮಾಹಿತಿ ಭರ್ತಿ ಮಾಡಲು ಅವಕಾಶ ನೀಡಲಾಗಿದೆ.

ಮನೆ-ಮನೆ ಸಮೀಕ್ಷೆ:

ಸ್ವಯಂ-ಗಣತಿ ಪ್ರಕ್ರಿಯೆ ಮುಗಿದ ನಂತರ, ಏಪ್ರಿಲ್ 16 ರಿಂದ ಮೇ 15 ರವರೆಗೆ ಜನಗಣತಿ ಕಾರ್ಯಕರ್ತರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಯಾರು ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಲು ಸಾಧ್ಯವಾಗುವುದಿಲ್ಲವೋ, ಅಂತಹವರ ಮಾಹಿತಿಯನ್ನು ಗಣತಿದಾರರು ಖುದ್ದಾಗಿ ಸಂಗ್ರಹಿಸಲಿದ್ದಾರೆ.

ಸಹಕಾರಕ್ಕೆ ಮನವಿ:

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು, “ಜನಗಣತಿಯು ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಿ, ಈ ರಾಷ್ಟ್ರೀಯ ಕಾರ್ಯವನ್ನು ಯಶಸ್ವಿಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.

 


Share this with Friends

Related Post