Sat. Jun 6th, 2026

ನವ ಮಂಗಳೂರು ಬಂದರು ಅಭಿವೃದ್ಧಿಗೆ ಕೇಂದ್ರದ ₹438 ಕೋಟಿ ಬಂಪರ್ ಕೊಡುಗೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಹರ್ಷ

Share this with Friends

ಮಂಗಳೂರು: ದಕ್ಷಿಣ ಭಾರತದ ಪ್ರಮುಖ ಮೆರಿಟೈಮ್ ಹಬ್ ಆಗಿ ಗುರುತಿಸಿಕೊಂಡಿರುವ ನವ ಮಂಗಳೂರು ಬಂದರಿನ (NMPA) ಮೂಲಸೌಕರ್ಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕೇಂದ್ರ ಸರ್ಕಾರವು ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ. ಬಂದರಿನ 9ನೇ ಸಂಖ್ಯೆಯ ಬರ್ತ್‌ನ ಪುನರ್‌ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು (MoPSW) ಒಟ್ಟು ₹438.29 ಕೋಟಿ ವೆಚ್ಚದ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, “ನವ ಮಂಗಳೂರು ಬಂದರಿನ ಬರ್ತ್ ಸಂಖ್ಯೆ 9ರಲ್ಲಿ ಕೈಗೆತ್ತಿಕೊಳ್ಳಲಿರುವ ಈ ಪುನರ್‌ ಅಭಿವೃದ್ಧಿ ಕಾಮಗಾರಿಯು ಕರಾವಳಿಯ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿದೆ. ವಿಶೇಷವಾಗಿ ಲಿಕ್ವಿಡ್‌ ಕಾರ್ಗೋ (ದ್ರವ ರೂಪದ ಸರಕು) ನಿರ್ವಹಣಾ ಸಾಮರ್ಥ್ಯವನ್ನು ಇದು ಗಣನೀಯವಾಗಿ ಹೆಚ್ಚಿಸಲಿದೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಈ ಬರ್ತ್ ಅಭಿವೃದ್ಧಿಯಾಗುವುದರಿಂದ ಅಂತರಾಷ್ಟ್ರೀಯ ಮಟ್ಟದ ಬೃಹತ್ ಹಡಗುಗಳು ಸುಲಭವಾಗಿ ಬಂದರಿಗೆ ಆಗಮಿಸಲು ಮತ್ತು ಕಾರ್ಯಾಚರಣೆ ನಡೆಸಲು ಹೆಚ್ಚಿನ ಅನುಕೂಲವಾಗಲಿದೆ,” ಎಂದು ವಿವರಿಸಿದ್ದಾರೆ.

ಎನರ್ಜಿ ಗೇಟ್‌ವೇ ಆಗಿ ಎನ್‌ಎಂಪಿಎ:

“ನಮ್ಮ ಬಂದರು ಕೇವಲ ಸರಕು ಸಾಗಣೆಯ ಕೇಂದ್ರವಲ್ಲ, ಇದು ಕರ್ನಾಟಕ ಮತ್ತು ಕೇರಳದ ಒಳನಾಡು ಪ್ರದೇಶಗಳಿಗೆ ಪ್ರಮುಖ ಮೆರಿಟೈಮ್ ಹಾಗೂ ಎನರ್ಜಿ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಯೋಜನೆಯಿಂದಾಗಿ ಎನ್‌ಎಂಪಿಎಯ ಮೂಲಸೌಕರ್ಯ ಮತ್ತಷ್ಟು ಬಲಗೊಳ್ಳಲಿದ್ದು, ಇಂಧನ ಭದ್ರತೆ ಮತ್ತು ಕೈಗಾರಿಕಾ ಅಗತ್ಯತೆಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದು ಕರಾವಳಿ ಭಾಗದ ಪ್ರಮುಖ ಕೈಗಾರಿಕೆಗಳು, ಲಾಜಿಸ್ಟಿಕ್ಸ್ ವ್ಯವಸ್ಥೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ,” ಎಂದು ಸಂಸದರು ಆಶಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬರಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಸಾಗರಮಾಲಾ’ ಯೋಜನೆಯಡಿ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.

 


Share this with Friends

Related Post