ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಬಗ್ಗೆ ಅಸಡ್ಡೆ ಇದ್ದು, ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆನೇಕಲ್ ಸಮೀಪ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಪಡೆದು ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುತ್ತಿರುವ ಸರ್ಕಾರದ ನಿರ್ಧಾರವನ್ನು ವಿಜಯೇಂದ್ರ ಪ್ರಶ್ನಿಸಿದರು. “ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸಾವಿರಾರು ಎಕರೆ ಜಾಗ ಲಭ್ಯವಿದೆ. ಅಲ್ಲಿ ಸ್ಟೇಡಿಯಂ ನಿರ್ಮಿಸಲು ಅವಕಾಶವಿತ್ತು. ಅದನ್ನು ಬಿಟ್ಟು ಆನೇಕಲ್‌ನಲ್ಲಿ ರೈತರಿಗೆ ಪದೇ ಪದೇ ತೊಂದರೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ನೆರೆ ಮತ್ತು ಬರಗಾಲ ಬಂದಾಗ ಸರ್ಕಾರ ರೈತರ ಕೈ ಹಿಡಿಯಲಿಲ್ಲ. ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಬಿಜೆಪಿ ಎಂದಿಗೂ ರೈತರ ಪರವಾಗಿ ನಿಲ್ಲಲಿದ್ದು, ಅನ್ನದಾತರ ಹಿತಾಸಕ್ತಿ ಕಡೆಗಣಿಸಲು ಬಿಡುವುದಿಲ್ಲ” ಎಂದು ಎಚ್ಚರಿಸಿದರು.
ದೇವೇಗೌಡರ ಆಯ್ಕೆಗೆ ಬಿಜೆಪಿ ವಿರೋಧವಿಲ್ಲ:
ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಪಕ್ಷದೊಳಗೆ ಸೂಕ್ತ ಚರ್ಚೆಗಳು ನಡೆದಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿಯ ಯಾವುದೇ ವಿರೋಧವಿಲ್ಲ. ಈ ನಿರ್ಧಾರವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಹೈಕಮಾಂಡ್‌ನಿಂದ ಯಾವುದೇ ಅಂತಿಮ ಸೂಚನೆ ಬಂದಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಮೊದಲು ತೆರಿಗೆ ಕಡಿಮೆ ಮಾಡಲಿ:
ಕೇಂದ್ರದ ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ವಿಜಯೇಂದ್ರ, “ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಇಷ್ಟವಿಲ್ಲದಿದ್ದರೂ ಕಠಿಣ ನಿರ್ಧಾರ ಕೈಗೊಂಡಿದೆ. ಈ ಹಿಂದೆ ತೈಲ ಬೆಲೆ 10 ರೂಪಾಯಿ ಕಡಿಮೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜ್ಯದ ಜನರ ಒಳಿತಿಗಾಗಿ ಇಂಧನ ಮೇಲಿನ ರಾಜ್ಯ ಸರ್ಕಾರದ ತೆರಿಗೆಯನ್ನು ಕಡಿತಗೊಳಿಸಲಿ. ಜಾಗತಿಕ ಸ್ಥಿತಿಗತಿಯನ್ನು ಅರ್ಥ ಮಾಡಿಕೊಂಡು ಸಿಎಂ ಈ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದ ಅವರು, “ಖರ್ಗೆ ಅವರು ಬಿಜೆಪಿಗೆ ಬುದ್ಧಿ ಹೇಳುವುದನ್ನು ನಿಲ್ಲಿಸಲಿ. ಅದರ ಬದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ರಾಜ್ಯ ತೆರಿಗೆಯನ್ನು ಕಡಿಮೆ ಮಾಡಿ ಇಡೀ ದೇಶಕ್ಕೆ ಮಾದರಿಯಾಗುವಂತೆ ಮುಖ್ಯಮಂತ್ರಿಗೆ ಬುದ್ಧಿ ಹೇಳಲಿ” ಎಂದು ಟಾಂಗ್ ನೀಡಿದರು.
ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್:
ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಯಾವ ಮಟ್ಟಕ್ಕಾದರೂ ಈ ಸರ್ಕಾರ ಇಳಿಯಲಿದೆ. ಅಳಂದ ಗಲಭೆ ಪ್ರಕರಣವನ್ನು ಕೈ ಬಿಡಲು ಸಚಿವ ಸಂಪಟು ತೀರ್ಮಾನ ಕೈಗೊಂಡಿದೆ. ದೇಶದ್ರೋಹಿಗಳ ವಿರುದ್ಧ, ಕಾನೂನು ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಕಾಂಗ್ರೆಸ್ ತಮ್ಮ ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಹಿಂದೂಗಳಿಗೆ ಪದೇ ಪದೇ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ನೀತಿಯನ್ನು ರಾಜ್ಯದ ಜನ ಗಮನಿಸಿದ್ದಾರೆ. ವಿರೋಧ ಪಕ್ಷವಾಗಿ ನಾವೂ ಹೋರಾಟ ಮಾಡುತ್ತೇವೆ. ಹಿಂದೂ ವಿರೋಧ ನೀತಿ ಅನುಸರಿಸುತ್ತಿರುವುದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದರು.

