Sat. Jun 6th, 2026

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿಯ ‘ಮಾನವ ಸರಪಳಿ’ಗೆ ಪೊಲೀಸ್ ಬ್ರೇಕ್; ಟೌನ್‌ಹಾಲ್ ಚಳವಳಿಗೆ ತಡೆ!

Share this with Friends

ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ ಸಂಘಟನೆಯು ಮೇ 24ರ ಭಾನುವಾರ ಟೌನ್‌ಹಾಲ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ “ಶಾಂತಿಯುತ ಮಾನವ ಸರಪಳಿ ನಿರ್ಮಾಣ” ಜಾಗೃತಿ ಅಭಿಯಾನಕ್ಕೆ ಪೊಲೀಸರು ಬಿಗಿ ಒಡ್ಡಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಆಯೋಜಕರಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಕಾರ್ಯಕ್ರಮಕ್ಕೆ ತಡೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ಸೃಷ್ಟಿಸಿದ ಆತಂಕ:

“ಎದ್ದೇಳಿ ಯುವಕರೇ, ಜೊತೆಗೂಡಿ… ಉತ್ತಮ ಕರ್ನಾಟಕ ನಿರ್ಮಾಣ ಮಾಡಲು ಒಂದು ಹೆಜ್ಜೆ ಮುಂದೆ ಇಡೋಣ” ಎಂಬ ಘೋಷಣೆಯೊಂದಿಗೆ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ನಡೆಸಿತ್ತು. ಭಾನುವಾರ ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್ ಮುಂದೆ ಜಮಾಯಿಸುವಂತೆ ಯುವಕರಿಗೆ ಕರೆ ನೀಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನ ಸೇರುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.

ಪೊಲೀಸ್ ಆಕ್ಷೇಪಣೆಯ ಪ್ರಮುಖ ಅಂಶಗಳು:

ನಿಯಂತ್ರಣವಿಲ್ಲದ ಜನಸ್ತೋಮ: ಆಯೋಜಕರು ಕಾರ್ಯಕ್ರಮಕ್ಕೆ ಇಷ್ಟೇ ಜನ ಬರುತ್ತಾರೆ ಎಂಬ ಮಿತಿಯನ್ನು ನಿಗದಿಪಡಿಸದ ಕಾರಣ ಸಾರ್ವಜನಿಕ ಭದ್ರತೆಗೆ ಆತಂಕ ಎದುರಾಗಿದೆ.

ಸಂಚಾರಕ್ಕೆ ಧಕ್ಕೆ: ಟೌನ್‌ಹಾಲ್ ಪ್ರಮುಖ ಜಂಕ್ಷನ್ ಆಗಿದ್ದು, ಮಾನವ ಸರಪಳಿ ನಿರ್ಮಿಸಿದರೆ ಆಂಬುಲೆನ್ಸ್ ಹಾಗೂ ಇತರೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಪ್ರವಾಸಿ ಬಸ್‌ಗಳಿಗೆ ಅಡ್ಡಿ: ಈ ಭಾಗದಲ್ಲಿ ಇತ್ತೀಚೆಗಷ್ಟೇ ಆರಂಭಿಸಲಾದ ಪ್ರವಾಸೋದ್ಯಮ ಇಲಾಖೆಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ನಿಲ್ದಾಣಕ್ಕೂ ಈ ಚಳವಳಿಯಿಂದ ತೊಂದರೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದ ಅಸ್ತ್ರ:

ಬೆಂಗಳೂರು ನಗರದಲ್ಲಿ “ಫ್ರೀಡಂ ಪಾರ್ಕ್” ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮುಷ್ಕರ ಅಥವಾ ಜಾಗೃತಿ ಅಭಿಯಾನ ನಡೆಸುವಂತಿಲ್ಲ ಎಂಬ ಹೈಕೋರ್ಟ್‌ನ (W.P.No: 5781/2021) ಕಟ್ಟುನಿಟ್ಟಿನ ಆದೇಶವನ್ನು ನೋಟಿಸ್‌ನಲ್ಲಿ ನೆನಪಿಸಲಾಗಿದೆ.

ಒಂದು ವೇಳೆ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನ ನಡೆಸಲೇಬೇಕಿದ್ದರೆ, ಟೌನ್‌ಹಾಲ್ ಒಳಗಡೆ ಮುಂಗಡ ಬುಕಿಂಗ್ ಮಾಡಬೇಕು ಇಲ್ಲವೇ ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಿಸಬೇಕು ಎಂದು ಸೂಚಿಸಲಾಗಿದೆ. ಆದೇಶ ಉಲ್ಲಂಘಿಸಿ ರಸ್ತೆಗಿಳಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

 


Share this with Friends

Related Post