Wed. Jul 15th, 2026

ಆಷಾಢ ಶುಕ್ರವಾರದ ದರ್ಶನಕ್ಕೆ ಚಾಮುಂಡಿ ಬೆಟ್ಟದಲ್ಲಿ ಹೊಸ ರೂಲ್ಸ್: 300 ರೂ. ಟಿಕೆಟ್ ರದ್ದು, ವಿಐಪಿಗಳಿಗೆ ಪ್ರತ್ಯೇಕ ಸಮಯ ನಿಗದಿ!

Share this with Friends

ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ಬಾರಿ ಆಷಾಢ ಶುಕ್ರವಾರಗಳಂದು ಸಾಮಾನ್ಯ ಭಕ್ತರಿಗೆ ಸುಲಭವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ದರ್ಶನ ಭಾಗ್ಯ ಕಲ್ಪಿಸುವುದೇ ನಮ್ಮ ಮೊದಲ ಆದ್ಯತೆ ಇದಕ್ಕಾಗಿ ಈ ಬಾರಿ ವಿಐಪಿ ದರ್ಶನಕ್ಕೆ ಕೇವಲ ಬೆಳಗಿನ ಜಾವದ ನಿರ್ದಿಷ್ಟ ಸಮಯವನ್ನು ಮಾತ್ರ ಫಿಕ್ಸ್ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಮಾಸದ ಅಂಗವಾಗಿ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಹಾಗೂ ಸುಲಭ ದರ್ಶನ ಕಲ್ಪಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಐಪಿ ಹಾಗೂ ಶಿಫಾರಸು ದರ್ಶನಕ್ಕೆ ಟೈಮ್ ಫಿಕ್ಸ್

ಗಣ್ಯರ ಭೇಟಿಯಿಂದಾಗಿ ಸಾಮಾನ್ಯ ಭಕ್ತರಿಗೆ ದರ್ಶನ ತಡವಾಗುವುದನ್ನು ತಪ್ಪಿಸಲು ಈ ಬಾರಿ ವಿಐಪಿ ಹಾಗೂ ಶಿಫಾರಸು ಪತ್ರ ತರುವವರಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗಿದೆ. ಮುಂಜಾನೆ 5:30 ರಿಂದ ಬೆಳಿಗ್ಗೆ 9:30 ರವರೆಗೆ ಮಾತ್ರ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಶಿಫಾರಸು ಪತ್ರ ತರುವವರಿಗೂ ಇದೇ ಸಮಯ ಅನ್ವಯವಾಗಲಿದ್ದು, ಅವರಿಗಾಗಿ ಪ್ರತ್ಯೇಕ ಸರತಿ ಸಾಲಿನ (ಕ್ಯೂ) ವ್ಯವಸ್ಥೆ ಇರಲಿದೆ.

ಬೆಟ್ಟಕ್ಕೆ ವಾಹನ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿದ್ದು, ಕೇವಲ ಶಾಸಕರು, ಸಚಿವರು ಮತ್ತು ನ್ಯಾಯಾಧೀಶರ ಅಧಿಕೃತ ವಾಹನಗಳಿಗೆ ಮಾತ್ರ ಚಾಮುಂಡಿ ಬೆಟ್ಟದ ಮೇಲಕ್ಕೆ ಹೋಗಲು ಅನುಮತಿ ಇರಲಿದೆ. ಉಳಿದಂತೆ ಶಿಫಾರಸು ಪತ್ರ ತರುವವರು ಕೆಳಗಿನ ಲಲಿತಮಹಲ್ ಮೈದಾನದ ಬಳಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ, ಜಿಲ್ಲಾಡಳಿತದ ಉಚಿತ ಬಸ್ಸುಗಳ ಮೂಲಕವೇ ಬೆಟ್ಟಕ್ಕೆ ಬರಬೇಕಾಗುತ್ತದೆ.

300 ರೂಪಾಯಿ ವಿಶೇಷ ದರ್ಶನ ಟಿಕೆಟ್ ಸಂಪೂರ್ಣ ರದ್ದು

ಭಕ್ತರ ಹಿತದೃಷ್ಟಿಯಿಂದ ಈ ಬಾರಿ 300 ರೂ. ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ 300 ರೂ. ಟಿಕೆಟ್ ಪಡೆದವರು ಮತ್ತು ಧರ್ಮದರ್ಶನದ ಭಕ್ತರು ಒಂದೇ ಜಾಗದಲ್ಲಿ ಸೇರುತ್ತಿದ್ದರಿಂದ ಭಾರಿ ಗೊಂದಲ ಸೃಷ್ಟಿಯಾಗುತ್ತಿತ್ತು. ಅಲ್ಲದೆ, ಟಿಕೆಟ್ ಪಡೆದವರಿಗೂ ದರ್ಶನ ಪಡೆಯಲು ಅಷ್ಟೇ ಸಮಯ ಹಿಡಿಯುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಯಾವುದೇ ವಿಶೇಷ ಪ್ರಯೋಜನವಾಗದ ಕಾರಣ ಈ ಬಾರಿ ಈ ಟಿಕೆಟ್ ವ್ಯವಸ್ಥೆಯನ್ನು ಬೇಡ ಎಂದು ಕಟ್ಟುನಿಟ್ಟಾಗಿ ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಭಕ್ತಾದಿಗಳಿಗೆ ಉಚಿತ ಬಾದಾಮಿ ಹಾಲು, ಬಿಸ್ಕೆಟ್ ವ್ಯವಸ್ಥೆ

ಮೆಟ್ಟಿಲು ಹತ್ತಿ ಬರುವ ಭಕ್ತರ ಅನುಕೂಲಕ್ಕಾಗಿ ಶಾಶ್ವತ ಶೌಚಾಲಯ ನಿರ್ಮಿಸಲು ಬೇಡಿಕೆ ಇದ್ದು, ಶೀಘ್ರದಲ್ಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಆಷಾಢ ಶುಕ್ರವಾರದ ಪೂಜೆಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗಾಗಿ ಮೂರು ಕಡೆ ‘ವಿಶೇಷ ನಿಗದಿತ ಸ್ಥಳ’ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ನಡೆದುಕೊಂಡು ಬರುವ ಎಲ್ಲಾ ಭಕ್ತಾದಿಗಳಿಗೆ ಶಕ್ತಿ ತುಂಬಲು ಉಚಿತವಾಗಿ ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವಿತರಿಸುವ ವಿನೂತನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ದೇವಾಲಯದ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಭಕ್ತರು ನೆಮ್ಮದಿಯಿಂದ ತಾಯಿ‌ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

 


Share this with Friends

Related Post