Wed. Jul 15th, 2026

ಮತದಾರರ ಪಟ್ಟಿ ಪರಿಷ್ಕರಣೆ: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್‌ಗೆ ಎನ್ಯುಮರೇಷನ್ ಫಾರ್ಮ್ ವಿತರಣೆ, ಜಾಗೃತಿಗೆ ಕರೆ!

Share this with Friends

ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)–2026 ರ ಅಭಿಯಾನದ ಭಾಗವಾಗಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಅಧಿಕಾರಿಗಳು ಎನ್ಯುಮರೇಷನ್ ಫಾರ್ಮ್ ಅನ್ನು ವಿತರಿಸಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಲ್ಲೇಶ್ವರಂ ವಿಭಾಗದ ಕಂದಾಯ ಇಲಾಖೆ ಅಧಿಕಾರಿಗಳು ದ್ರಾವಿಡ್ ಅವರ ನಿವಾಸಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಫಾರ್ಮ್ ವಿತರಣೆಯ ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಎಂ. ಶ್ರೀನಿವಾಸ್, ಬಿಎಲ್ಒ (ಮತಗಟ್ಟೆ ಮಟ್ಟದ ಅಧಿಕಾರಿ) ಹಾಗೂ ಮಹಾನಗರ ಪಾಲಿಕೆಯ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಯೊಬ್ಬರೂ ಹೆಸರು ನೋಂದಾಯಿಸಿ: ರಾಹುಲ್ ದ್ರಾವಿಡ್ ಮನವಿ

ಫಾರ್ಮ್ ಸ್ವೀಕರಿಸಿದ ಬಳಿಕ ಮಾತನಾಡಿದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದೆ. ಅರ್ಹರಾಗಿರುವ ಪ್ರತಿಯೊಬ್ಬ ನಾಗರಿಕರು ಈ ಎನ್ಯುಮರೇಷನ್ ಫಾರ್ಮ್ ಅನ್ನು ಪಡೆದುಕೊಂಡು, ಸರಿಯಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಯಾವುದೇ ತಪ್ಪುಗಳಿಲ್ಲದೆ ಸರಿಯಾಗಿ ಸೇರ್ಪಡೆಗೊಳ್ಳುವಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮತ್ತು ಹೊಸ ಮತದಾರರಲ್ಲಿ ವಿಶೇಷ ಮನವಿ ಮಾಡಿಕೊಂಡರು.

ದ್ರಾವಿಡ್ ಅವರಿಗೇ ಎದುರಾಗಿದ್ದ ವೋಟಿಂಗ್ ಸಮಸ್ಯೆ!

ರಾಹುಲ್ ದ್ರಾವಿಡ್ ಅವರು ಈ ಜಾಗೃತಿ ಮೂಡಿಸಲು ಮತ್ತೊಂದು ಮುಖ್ಯ ಕಾರಣವಿದೆ. ಈ ಹಿಂದೆ 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ವತಃ ರಾಹುಲ್ ದ್ರಾವಿಡ್ ಅವರ ಹೆಸರೇ ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗಿತ್ತು! ಇಂದಿರಾನಗರದಿಂದ ಮಲ್ಲೇಶ್ವರಂಗೆ ಮನೆ ಬದಲಾಯಿಸಿದಾಗ ತಾಂತ್ರಿಕ ಕಾರಣಗಳಿಂದಾಗಿ ಅವರ ಹೆಸರು ಹೊಸ ಪಟ್ಟಿಗೆ ಸರಿಯಾದ ಸಮಯಕ್ಕೆ ಸೇರ್ಪಡೆಯಾಗಿರಲಿಲ್ಲ, ಹೀಗಾಗಿ ಅವರು ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ.

ತಮಗೆ ಎದುರಾದ ಇಂತಹ ಪರಿಸ್ಥಿತಿ ರಾಜ್ಯದ ಇನ್ಯಾವ ನಾಗರಿಕನಿಗೂ ಎದುರಾಗಬಾರದು ಎಂಬ ಕಾರಣಕ್ಕಾಗಿಯೇ ಅವರು ಈ ಬಾರಿ ಇಲಾಖೆಯೊಂದಿಗೆ ಕೈಜೋಡಿಸಿ, ಬಿಎಲ್‌ಒಗಳು ಮನೆಗೆ ಬಂದಾಗ ಸೂಕ್ತ ದಾಖಲೆಗಳನ್ನು ನೀಡಿ ಸಹಕರಿಸಿ ಎಂದು ಜನರಲ್ಲಿ ಕಳಕಳಿಯಿಂದ ಮನವಿ ಮಾಡಿದ್ದಾರೆ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅರ್ಹ ಮತದಾರರನ್ನು ಗುರುತಿಸಲು ಮತ್ತು ಪಟ್ಟಿಯನ್ನು ನವೀಕರಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ನೇತೃತ್ವದಲ್ಲಿ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ಇಲಾಖೆ ಕೋರಿದೆ.

 

 


Share this with Friends

Related Post