ಬೆಂಗಳೂರು: “ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಮುಖ ಸಭೆಗಳು ನಡೆದಾಗಲೆಲ್ಲಾ ದೇಶದಲ್ಲಿ ವೈಚಾರಿಕ ಹತ್ಯೆಗಳು ಮತ್ತು ದೊಡ್ಡ ಅನಾಹುತಗಳು ಸಂಭವಿಸಿವೆ” ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿ.ಕೆ. ಹರಿಪ್ರಸಾದ್, “ಅವರು ಬೆಳಗಾವಿಯಲ್ಲಿ ಏಕೆ ಸಭೆ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಭೆಯ ನಿರ್ಣಯಗಳು ಹೊರಬಂದ ನಂತರ ಆ ಬಗ್ಗೆ ಮಾತನಾಡೋಣ. ಆದರೆ ಇತಿಹಾಸವನ್ನು ಗಮನಿಸಿದರೆ, ಹಿಂದೆ ಇವರ ಇಂತಹ ಸಭೆಗಳು ನಡೆದಾಗ ದಾಬೋಲ್ಕರ್, ಪನ್ಸಾರೆ, ಪ್ರೊ. ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಗಳಾಗಿದ್ದವು. ಈಗಲೂ ಸಭೆ ನಡೆಯುತ್ತಿದ್ದು, ಮುಂದೆ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆಯೋ ಕಾದು ನೋಡಿ ಪ್ರತಿಕ್ರಿಯೆ ನೀಡುತ್ತೇನೆ” ಎಂದು ಗಂಭೀರ ಆರೋಪ ಮಾಡಿದರು.
ಅಕ್ರಮ ವಲಸಿಗರು ಬಂದಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸಿ!
ರಾಜ್ಯ ಸರ್ಕಾರದ ನಿವಾಸಿ ಪ್ರಮಾಣಪತ್ರದಿಂದ ಅಕ್ರಮ ವಲಸಿಗರಿಗೆ ಅನುಕೂಲವಾಗಲಿದೆ ಎಂದು ಕೇಂದ್ರಕ್ಕೆ ಪತ್ರ ಬರೆದಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಹರಿಪ್ರಸಾದ್ ಕಿಡಿಕಾರಿದರು. “ಶೋಭಕ್ಕ ಅವರು ಪತ್ರವನ್ನು ಪ್ರಧಾನಿ ಅಥವಾ ರಾಷ್ಟ್ರಪತಿಗಳಿಗೆ ಬರೆಯಬೇಕು. ಅಕ್ರಮ ನುಸುಳುಕೋರರನ್ನು ಕರ್ನಾಟಕದವರೆಗೂ ಬರಲು ಬಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪತ್ರ ಬರೆಯಲಿ. ಕರ್ನಾಟಕ ರಾಜ್ಯವು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ. ಗಡಿಗಳನ್ನು ದಾಟಿ ಅಕ್ರಮ ವಲಸಿಗರು 4,000 ಕಿಲೋಮೀಟರ್ ದೂರದ ಕರ್ನಾಟಕದವರೆಗೂ ಬಂದಿದ್ದಾರೆ ಎಂದರೆ ಕೇಂದ್ರದ ಇವರು ಅಲ್ಲಿ ಕಡಲೇಕಾಯಿ ತಿನ್ನುತ್ತಿದ್ದರಾ?” ಎಂದು ಕಟುವಾಗಿ ಪ್ರಶ್ನಿಸಿದರು.
ಜಿಬಿಎ ಚುನಾವಣೆ ವಿಳಂಬಕ್ಕೆ ಅಧಿಕಾರಿಗಳ ಕೊರತೆಯೇ ಕಾರಣ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಮುಂದೂಡಿಕೆ ಕುರಿತ ಆಪಾದನೆಗಳಿಗೆ ಸ್ಪಷ್ಟನೆ ನೀಡಿದ ಅವರು, “ಚುನಾವಣೆ ನಡೆಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧವಾಗಿದ್ದು, ನಮ್ಮ ಪ್ರಣಾಳಿಕೆ ಸಮಿತಿಯೂ ಸಿದ್ಧವಿದೆ. ಆದರೆ ಪ್ರಸ್ತುತ ಎಸ್‌ಐಆರ್ (SIR) ಪ್ರಕ್ರಿಯೆ ನಡೆಸಲು ಅಗತ್ಯವಿರುವ ಸರ್ಕಾರಿ ಅಧಿಕಾರಿಗಳು ಸಿಗುತ್ತಿಲ್ಲ. ಸದ್ಯ ಗೃಹರಕ್ಷಕರನ್ನು (Homeguards) ಬಳಸಿಕೊಂಡು ಕೆಲಸ ಮಾಡಿಸಲಾಗುತ್ತಿದೆಯಾದರೂ, ಅವರಿಂದ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳ ಕೊರತೆಯಿಂದಾಗಿ ಎಸ್‌ಐಆರ್ ವಿಳಂಬವಾಗುತ್ತಿದೆ” ಎಂದರು.
ಕೋರ್ಟ್ ಆದೇಶದಂತೆ ಚುನಾವಣೆ ನಡೆಸಬೇಕಾದರೆ ಜುಲೈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಬೇಕು. ಆದರೆ ಯಾವ ಮತಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂಬ ಬಗ್ಗೆ ತಾಂತ್ರಿಕ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಗೊಂದಲ ನಿವಾರಣೆಗೆ ನ್ಯಾಯಾಲಯದ ಮೆಟ್ಟಿಲೇರಲಾಗಿದೆಯೇ ಹೊರತು, ಇದು ಸರ್ಕಾರದಿಂದ ಮಾಡಿರುವ ಅಧಿಕೃತ ಮನವಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯದ್ದು ಭಾರತದ ನೈಜ ಮತದಾರರನ್ನು ಕೈಬಿಡುವ ಕುತಂತ್ರ:
ರಾಜ್ಯ ಸರ್ಕಾರದ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ದ (PRC) ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್, ಬಾಂಗ್ಲಾದೇಶದ ವಲಸಿಗರ ಹೆಸರಿನಲ್ಲಿ ಬಿಜೆಪಿ ಕೇವಲ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ತೀವ್ರವಾಗಿ ಆಪಾದಿಸಿದ್ದಾರೆ. ದೇಶದ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ಬಿಜೆಪಿಯದ್ದು ದ್ವೇಷ ಹಾಗೂ ಓಲೈಕೆ ರಾಜಕಾರಣ
ಅಕ್ರಮ ವಲಸಿಗರನ್ನು ಕೇಂದ್ರ ಸರ್ಕಾರ ಒಳಗೆ ಬಿಟ್ಟಿದ್ದರೂ ರಾಜ್ಯ ಸರ್ಕಾರ ಅವರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುತ್ತಿದೆ ಎಂಬ ಪ್ರಶ್ನೆಗೆ ಹರಿಪ್ರಸಾದ್ ಅವರು ಇತಿಹಾಸದ ಉದಾಹರಣೆಗಳೊಂದಿಗೆ ಉತ್ತರಿಸಿದರು:
ರಾಜಕೀಯಕ್ಕಾಗಿ ವಲಸಿಗರ ಅಸ್ತ್ರ: “ನಾನು ಕಾಲೇಜು ದಿನಗಳಲ್ಲಿದ್ದಾಗಿನಿಂದಲೂ ಬಿಜೆಪಿಯ ರಾಜಕಾರಣವನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಮೊದಲು ಮುಂಬೈನಿಂದ ದಕ್ಷಿಣ ಭಾರತದವರನ್ನು ರಾಜಕೀಯ ಕಾರಣಗಳಿಗಾಗಿ ಓಡಿಸಲು ಯತ್ನಿಸಿದರು. ದಕ್ಷಿಣ ಭಾರತದವರು ಆರ್ಥಿಕವಾಗಿ ಪ್ರಬಲರಾದ ಬಳಿಕ ಗುಜರಾತಿಗಳನ್ನು ಗುರಿಯಾಗಿಸಿಕೊಂಡರು. ಅಲ್ಲಿ ಹಣದ ವಿಚಾರದಲ್ಲಿ ಕಟ್ಟುನಿಟ್ಟಾದಾಗ ಅವರನ್ನು ಬಿಟ್ಟು ಅಲ್ಪಸಂಖ್ಯಾತರನ್ನು ಹಿಡಿದುಕೊಂಡರು. ಈಗ ಬಾಂಗ್ಲಾದೇಶಿಗರು ಎಂದು ಹೊಸ ರಾಗ ಹಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಎನ್‌ಆರ್‌ಸಿ ಮತ್ತು ಸಿಎಎ ವೈಫಲ್ಯ: ಅಸ್ಸಾಂನಲ್ಲಿ ಎನ್‌ಆರ್‌ಸಿ (NRC) ಮತ್ತು ಸಿಎಎ (CAA) ಜಾರಿಗೆ ತಂದು ಸುಮಾರು 30 ಲಕ್ಷ ಜನರನ್ನು ಗುರುತಿಸಲಾಗಿತ್ತು. ಆದರೆ ಅವರಲ್ಲಿ 21 ಲಕ್ಷ ನೈಜ ಹಿಂದೂಗಳೇ ದೇಶದಿಂದ ಹೊರಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದೇ ಕಾರಣಕ್ಕೆ ಆ ಪ್ರಕ್ರಿಯೆಯನ್ನು ಬಿಜೆಪಿ ಅಲ್ಲಿಗೇ ಕೈಬಿಟ್ಟಿತು. ಪ್ರಸ್ತುತ ಬಾಂಗ್ಲಾದೇಶಿಗರ ಹೆಸರಿನಲ್ಲಿ ಭಾರತದ ನೈಜ ಮತದಾರರ ಹಕ್ಕನ್ನು ಕಸಿಯುವ ಕುತಂತ್ರ ನಡೆಯುತ್ತಿದೆ ಎಂದು ದೂರಿದರು.
ವಿನಯ್ ಕುಲಕರ್ಣಿ ಅರ್ಜಿ ಮತ್ತು ಮೂಡಿಗೆರೆ ವಿವಾದಕ್ಕೆ ಪ್ರತಿಕ್ರಿಯೆ
ಶಾಸಕ ಸ್ಥಾನ ಪುನರ್ ಸ್ಥಾಪನೆ: ಧಾರವಾಡ ಶಾಸಕ ಸ್ಥಾನವನ್ನು ಪುನರ್ ಸ್ಥಾಪಿಸಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಅವರು ಸಲ್ಲಿಸಿರುವ ಅರ್ಜಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಇಡೀ ವಿಷಯವು ಸದ್ಯ ನ್ಯಾಯಾಲಯದ ಮೆಟ್ಟಿಲೇರಿದೆ. ಗೌರವಾನ್ವಿತ ನ್ಯಾಯಾಲಯವು ಈ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡೋಣ” ಎಂದು ತಟಸ್ಥವಾಗಿ ನುಡಿದರು.
ಮೂಡಿಗೆರೆ ಗಲಾಟೆ ನಿಯಂತ್ರಣಕ್ಕೆ ಮನವಿ: ಮೂಡಿಗೆರೆಯಲ್ಲಿ ನಡೆಯುತ್ತಿರುವ ಪರ-ವಿರೋಧದ ಘಟನೆಗಳ ಬಗ್ಗೆ ಮಾತನಾಡಿದ ಅವರು, “ಅಲ್ಲಿ ಯಾವುದೇ ಪರ-ವಿರೋಧದ ಒಳಜಗಳ ಇಲ್ಲ. ಬದಲಾಗಿ ಆರೆಸ್ಸೆಸ್ (RSS) ಹಾಗೂ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರ ಸಂಘಟನೆಗಳ ನಾಯಕರ ಗಲಾಟೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವ ಇಂತಹ ಕಿಡಿಗೇಡಿಗಳನ್ನು ತಕ್ಷಣವೇ ನಿಯಂತ್ರಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ” ಎಂದರು.
ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಇಲ್ಲ!
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಿನ್ನಡೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಹರಿಪ್ರಸಾದ್, “ಸರ್ಕಾರ ಬೇರೆ, ಪಕ್ಷ ಬೇರೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪಕ್ಷವನ್ನು ಸಂಘಟಿಸುವುದು ನಮ್ಮ ಸಾಂಸ್ಥಿಕ ಜವಾಬ್ದಾರಿ. ಸರ್ಕಾರದ ನೀತಿ-ನಿಯಮಗಳನ್ನು ಜಾರಿಗೆ ತರುವುದು ಮುಖ್ಯಮಂತ್ರಿ ಮತ್ತು ಸಚಿವರ ಕೆಲಸ. ನಮ್ಮ ಸರ್ಕಾರ ಇಡೀ ಕರ್ನಾಟಕ ರಾಜ್ಯದ ಎಲ್ಲಾ ಜನರಿಗೂ ಅನ್ವಯಿಸುತ್ತದೆ. ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಸಮನ್ವಯದ ಕೊರತೆ ಇಲ್ಲ. ನಾವು ನಮ್ಮ ಪಕ್ಷದ ಆಂತರಿಕ ವಿಷಯಗಳನ್ನು ಸೂಕ್ತ ಸಮಯದಲ್ಲಿ ನಿರ್ವಹಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು

